
ಎಫ್‌ಐಆರ್
ಬೆಂಗಳೂರು: ಲೋಕಾಯುಕ್ತ ಪೊಲೀಸರ ಹೆಸರು ಬಳಸಿಕೊಂಡು ಸುಲಿಗೆಗೆ ಯತ್ನಿಸಿದ ಆರೋಪದಡಿ ಎಲೆಕ್ಟ್ರಿಕಲ್ ಗುತ್ತಿಗೆದಾರರೊಬ್ಬರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಾಜರಹಳ್ಳಿಯ ನಿವಾಸಿ ಶರಣಪ್ಪ ಕುರುಬನಳ್ಳ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್) ಸೆಕ್ಷನ್‌ಗಳಾದ 308(2) ಹಾಗೂ 308(3)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಗುತ್ತಿಗೆದಾರ ಜಾನ್ ಬೆನಡಿಕ್ಟ್ ಅವರು ದೂರು ನೀಡಿದ್ದರು.
ಎಫ್‌ಐಆರ್‌ನಲ್ಲಿ ಏನಿದೆ?:
‘ಶರಣಪ್ಪ ಅವರು ಕಳೆದ 19 ವರ್ಷಗಳಿಂದ ನಗರದಲ್ಲಿ ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಶರಣಪ್ಪ ಅವರು ಬೆಸ್ಕಾಂ ಅಧಿಕಾರಿಗಳು ಹಾಗೂ ಎಲೆಕ್ಟ್ರಿಲ್ ಗುತ್ತಿಗೆದಾರರ ಮಧ್ಯೆ ನಡೆಯುವ ಹಣದ ವ್ಯವಹಾರಗಳ ಆಡಿಯೊ ಸಂಭಾಷಣೆ ಹಾಗೂ ವಿಡಿಯೊವನ್ನು ಸಂಗ್ರಹಿಸಿಕೊಳ್ಳುತ್ತಿದ್ದರು. ಬಳಿಕ, ಬೆಸ್ಕಾಂ ಅಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ಹಣದ ವ್ಯವಹಾರವನ್ನು ಲೋಕಾಯುಕ್ತ ಪೊಲೀಸರಿಗೆ ತಿಳಿಸಿ ಬಂಧಿಸುವಂತೆ ಹೇಳುತ್ತೇನೆ ಎಂದು ಹೆದರಿಸುತ್ತಿದ್ದರು. ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡದಿರಲು ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.