ADVERTISEMENT

ಅಕ್ರಮ ಬಂಧನದಲ್ಲಿಟ್ಟು ಚಿತ್ರಹಿಂಸೆ: ಮಗಳ ವಿರುದ್ಧ ತಂದೆ ದೂರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 16:53 IST
Last Updated 17 ಜನವರಿ 2021, 16:53 IST

ಬೆಂಗಳೂರು: ‘ನನ್ನನ್ನು ಮನೆಯಲ್ಲಿ ಕೂಡಿಹಾಕಿದ್ದ ಮಗಳು ಹಾಗೂ ಅಳಿಯ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ’ ಎಂದು ಆರೋಪಿಸಿ ಬನಶಂಕರಿ ನಿವಾಸಿ ಮುನಿವೆಂಕಟರಾಮ (68) ಎಂಬುವರು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

‘ಮಗಳು ಗಂಗಾವತಿ ಹಾಗೂ ಅಳಿಯ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡಿಕೊಂಡು ಮುನಿವೆಂಕಟರಾಮ ಜೀವನ ನಡೆಸುತ್ತಿದ್ದರು. ನಂದಿನಿ ಲೇಔಟ್‌ನಲ್ಲಿ ವಾಸಿರುವ ಮಗಳು ಗಂಗಾವತಿ, ತಂದೆಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದರು. ತುರ್ತು ಕೆಲಸಕ್ಕೆ ಹಣ ಬೇಕೆಂದು ಹೇಳಿದ್ದ ಗಂಗಾವತಿ, ಮುನಿವೆಂಕಟರಾಮ ಬಳಿ ಇದ್ದ 2 ಚಿನ್ನದ ಉಂಗುರ ಹಾಗೂ ಕತ್ತಿನಲ್ಲಿದ್ದ ಚಿನ್ನದ ಸರ ತೆಗೆದುಕೊಂಡು ಮಾರಿದ್ದರು’

ADVERTISEMENT

‘ಬಿಡಿಎ ನಿವೇಶನ ಪಡೆಯಲು ಯೋಚಿಸಿದ್ದ ಮುನಿವೆಂಕಟರಾಮ, ₹ 4.65 ಲಕ್ಷ ಹೊಂದಿಸಿಟ್ಟಿದ್ದರು. ನಿವೇಶನ ಕೊಡಿಸುವುದಾಗಿ ಆಮಿಷವೊಡ್ಡಿ ಆ ಹಣವನ್ನೂ ಮಗಳು ಹಾಗೂ ಅಳಿಯ ಪಡೆದುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಹಲವು ದಿನವಾದರೂ ಮಗಳು ಹಾಗೂ ಅಳಿಯ, ನಿವೇಶನ ಖರೀದಿಸಿ ಕೊಟ್ಟಿರಲಿಲ್ಲ. ಸಿಟ್ಟಾದ ಮುನಿವೆಂಕಟರಾಮ, ಹಣ ವಾಪಸು ಕೊಡುವಂತೆ ಒತ್ತಾಯಿಸಿದ್ದರು. ಅಷ್ಟಕ್ಕೆ ಕೋಪಗೊಂಡ ಮಗಳು ಹಾಗೂ ಅಳಿಯ, ಮನೆಯ ಕೊಠಡಿಯಲ್ಲೇ 5 ದಿನ ಕೂಡಿಹಾಕಿದ್ದರು. ಚಿತ್ರಹಿಂಸೆ ಸಹ ನೀಡಿದ್ದರು. ಸ್ಥಳೀಯರ ನೆರವಿನಿಂದ ಮನೆಯಿಂದ ತಪ್ಪಿಸಿಕೊಂಡಿದ್ದ ದೂರುದಾರ, ಠಾಣೆಗೆ ಬಂದು ದೂರು ನೀಡಿದ್ದಾರೆ. ವಿಚಾರಣೆ ಬಳಿಕವೇ ನಿಖರ ಮಾಹಿತಿ ತಿಳಿಯಲಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.