ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ಐವರು ಅತಿಥಿ ಉಪನ್ಯಾಸಕರ ವಿರುದ್ಧ ಎಫ್‌ಐಆರ್‌

ಲೈಂಗಿಕ ಕಿರುಕುಳ ಆರೋಪ: ರಾಮನಗರದ ಐಜೂರು ಠಾಣೆಗೆ ಪ್ರಕರಣ ವರ್ಗ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 16:25 IST
Last Updated 20 ಸೆಪ್ಟೆಂಬರ್ 2025, 16:25 IST
<div class="paragraphs"><p>ಎಫ್‌ಐಆರ್‌</p></div>

ಎಫ್‌ಐಆರ್‌

   

ಬೆಂಗಳೂರು: ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಐವರು ಅತಿಥಿ ಉಪನ್ಯಾಸಕರ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರುವ ರಾಮನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಸ್ವರೂಪ್‌ಕುಮಾರ್, ಬಿ.ಕೆ.ರಾಮಾಂಜನೇಯ, ರಂಗಸ್ವಾಮಿ, ಕೆ.ಜಗನ್ನಾಥ್ ಮತ್ತು ಶಿವರಾಮ್ ಅವರು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘30 ವರ್ಷದ ಅತಿಥಿ ಉಪನ್ಯಾಸಕಿ ನೀಡಿದ ದೂರಿನ ಮೇರೆಗೆ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಘಟನಾ ಸ್ಥಳ ಆಧರಿಸಿ, ರಾಮನಗರ ಜಿಲ್ಲೆಯ ಐಜೂರು ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲಿನ ಪೊಲೀಸರು ತನಿಖೆ ಮುಂದುವರೆಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಸ್ವರೂಪ್ ಕುಮಾರ್ ಮತ್ತು ರಾಮಾಂಜನೇಯ ಮಾನಸಿಕ ಹಿಂಸೆ ನೀಡಿ, ಅಪಪ್ರಚಾರ ಮಾಡುತ್ತಿದ್ದರು. ಅವರ ವಿರುದ್ಧ ಈ ಹಿಂದೆಯೂ ದೂರು ನೀಡಿದ್ದೆ. ದೂರು ನೀಡಿದ ಮೇಲೆ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅತಿಥಿ ಉಪನ್ಯಾಸಕ ಹುದ್ದೆಯಿಂದ ತೆಗೆಸಿ ಹಾಕಿದ್ದರು’ ಎಂದು ಉಪನ್ಯಾಸಕಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಸ್ವರೂಪ್ ನನ್ನ ವಿಡಿಯೊ ಮಾಡುತ್ತಿದ್ದ. ವಿಡಿಯೊ ಮಾಡುತ್ತಿರುವುದಕ್ಕೆ ಆಕ್ಷೇಪಿಸಿ ಮೊಬೈಲ್‌ ಕಸಿದುಕೊಂಡು ನೋಡಿದೆ. ನನ್ನ ಬಗ್ಗೆ ಅಸಹ್ಯ ಹಾಗೂ ಲೈಂಗಿಕವಾಗಿ ಬಳಸಿಕೊಳ್ಳುವುದರ ಬಗ್ಗೆ ಮಾತನಾಡಿರುವುದು ರೆಕಾರ್ಡ್ ಆಗಿತ್ತು. ಆ ಬಗ್ಗೆ ಪ್ರಶ್ನೆ ಮಾಡಿದ್ದೆ. ಆಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀನು ಹಳ್ಳಿಯಿಂದ ಬಂದು ಕೆಲಸ ಮಾಡುತ್ತೀಯಾ. ನೀನು, ನಾವು ಹೇಳಿದ ಹಾಗೇ ಕೇಳಬೇಕು. ಹೇಳಿದ ಜಾಗಕ್ಕೆ ಬಂದು ನಮ್ಮೆಲ್ಲರಿಗೂ ದೈಹಿಕ ಸುಖ ನೀಡಬೇಕು. ಇಲ್ಲವಾದರೆ ನಿನ್ನನ್ನು ಅಪಹರಣ ಮಾಡಿ ನಾವೆಲ್ಲರೂ ಎಂಜಾಯ್ ಮಾಡುತ್ತೇವೆ. ಕತ್ತರಿಸಿ ಬಿಸಾಡುತ್ತೇವೆ ಎಂಬುದಾಗಿ ಬೆದರಿಕೆ ಹಾಕಿದ್ದರು’ ಎಂದು ಉಪನ್ಯಾಸಕಿ ದೂರು ನೀಡಿದ್ದರು.

ಲೈಂಗಿಕ ಕಿರುಕುಳ ಮತ್ತು ಮಾನಸಿಕ ಕಿರಕುಳ ನೀಡಿದ ಐವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮಹಿಳೆ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.