ADVERTISEMENT

ವಂಚನೆ: ನಟಿ ಕರ್ಲಾ ವಿರುದ್ಧ ಎಫ್‌ಐಆರ್ ದಾಖಲು

ಐ–ಫೋನ್‌ಗಾಗಿ ₹ 61 ಸಾವಿರ ಪಡೆದ ಆರೋಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2018, 20:02 IST
Last Updated 21 ಜುಲೈ 2018, 20:02 IST
   

ಬೆಂಗಳೂರು: ‘ಬಿಗ್ ಬಾಸ್ 11ನೇ ಆವೃತ್ತಿಯ ಸ್ಪರ್ಧಿ ಹಾಗೂ ಬಾಲಿವುಡ್ ನಟಿ ಬಂದ್ಗಿ ಕರ್ಲಾ ಅವರು ಕಡಿಮೆ ಬೆಲೆಗೆ ಐ–ಫೋನ್ ಮಾರುವುದಾಗಿ ನಂಬಿಸಿ ₹ 61 ಸಾವಿರ ಪಡೆದು ವಂಚನೆ ಮಾಡಿದ್ದಾರೆ’ ಎಂದು ಆರೋಪಿಸಿ ನಗರದ ಖಾಸಗಿ ಕಂಪನಿ ಉದ್ಯೋಗಿ ಯುವರಾಜ್ ಸಿಂಗ್ ಯಾದವ್ ಎಂಬುವರು ಮಾರತ್ತಹಳ್ಳಿ ಠಾಣೆಗೆ ದೂರು ಕೊಟ್ಟಿದ್ದಾರೆ.

ಕರ್ಲಾ ಅವರು ‘₹ 1 ಲಕ್ಷ ಮೌಲ್ಯದ ‘ಐ–ಫೋನ್ ಎಕ್ಸ್‌’ ಮೊಬೈಲನ್ನು ₹ 61 ಸಾವಿರಕ್ಕೆ ಮಾರಾಟ ಮಾಡುತ್ತಿರುವುದಾಗಿ ‘ನೆಕ್ಸಾ ಫ್ಯಾಷನ್’ ವೆಬ್‌ಸೈಟ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಅದನ್ನು ನೋಡಿದ ಯುವರಾಜ್, ತಾವು ಮೊಬೈಲ್ ಖರೀದಿಸುವುದಾಗಿ ಪ್ರತಿಕ್ರಿಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಕರ್ಲಾ ಕೊಟ್ಟಿದ್ದ ಮೊಬೈಲ್ ಸಂಖ್ಯೆಗೆ ಮುಂಗಡವಾಗಿ ಪೇಟಿಎಂ ಮೂಲಕ ₹ 13 ಸಾವಿರ ರವಾನಿಸಿದ್ದೆ. ಉಳಿದ ಹಣವನ್ನು ಐ–ಫೋನ್ ಕೈಸೇರಿದ ಬಳಿಕ ತಲುಪಿಸುವುದಾಗಿ ಹೇಳಿದ್ದೆ. ಆಗ ಅವರು, ‘ಪಣತ್ತೂರು ಮುಖ್ಯರಸ್ತೆಯ ಬ್ಲೂಡಾರ್ಟ್‌ ಕೊರಿಯರ್ ಕಚೇರಿಗೆ ಮೊಬೈಲ್‌ ಕಳುಹಿಸುತ್ತೇನೆ. ಬಾಕಿ ಹಣ ಕೊಟ್ಟು ‍ಪಡೆದುಕೊಳ್ಳಿ’ ಎಂದಿದ್ದರು. ಜುಲೈ 18ರಂದು ಕಚೇರಿ ನೌಕರರು ಕರೆ ಮಾಡಿ, ನನ್ನ ಹೆಸರಿಗೆ ಪಾರ್ಸಲ್ ಬಂದಿರುವುದಾಗಿ ತಿಳಿಸಿದರು’ ಎಂದು ಯುವರಾಜ್ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಕಚೇರಿಗೆ ತೆರಳಿ ಉಳಿದ ₹48 ಸಾವಿರ ಪಾವತಿಸಿ ಪಾರ್ಸಲ್ ಪಡೆದುಕೊಂಡೆ. ಅಲ್ಲೇ ಬಾಕ್ಸ್ ತೆರೆದು ನೋಡಿದಾಗ, ನಕಲಿ ಮೊಬೈಲ್ ಇತ್ತು. ಆ ಬಗ್ಗೆ ನೌಕರರನ್ನು ವಿಚಾರಿಸಿದಾಗ, ‘ನಮ್ಮಿಂದ ಯಾವುದೇ ಲೋಪವಾಗಿಲ್ಲ. ಪಾರ್ಸಲ್ ಹೇಗೆ ಬಂತೋ, ಹಾಗೆಯೇ ನಿಮಗೆ ತಲುಪಿಸಿದ್ದೇವೆ. ಹಣ ಮರಳಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಆ ನಂತರ ಕರ್ಲಾ ಕೂಡ ಸಂಪರ್ಕಕ್ಕೆ ಸಿಗಲಿಲ್ಲ. ಹೀಗೆ ನನಗೆ ವಂಚಿಸಿರುವ ನಟಿ ಹಾಗೂ ಬ್ಲೂಡಾರ್ಟ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಕರ್ಲಾ ಖಾತೆಯಿಂದಲೇ ಪೋಸ್ಟ್ ಆಗಿದೆ. ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ. ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.