ADVERTISEMENT

ಗಾಳಿಯಲ್ಲಿ ಗುಂಡು ಹಾರಿಸಿದ ಗುತ್ತಿಗೆದಾರ

ರಾಜಾಜಿನಗರದ ರಾಮಮಂದಿರ ಬಳಿ ಘಟನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 20:16 IST
Last Updated 4 ಮಾರ್ಚ್ 2019, 20:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜಾಜಿನಗರ ಬಳಿಯ ರಾಮಮಂದಿರದ ಮನೆಯೊಂದಕ್ಕೆ ಪಾನಮತ್ತರಾಗಿ ನುಗ್ಗಿದ್ದ ಯುವಕರನ್ನು ಬೆದರಿಸುವುದಕ್ಕಾಗಿ ಮನೋಜ್ ಎಂಬಾತ, ಪಿಸ್ತೂಲ್‌ನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಪೊಲೀಸರು, ಮನೋಜ್ ಹಾಗೂ ಎದುರಾಳಿ ತಂಡದಲ್ಲಿದ್ದ ಸಿದ್ದರಾಮನ ದಿಣ್ಣೆಯ ನಿವಾಸಿ ಆದರ್ಶ, ಮುಖೇಶ್ ಎಂಬುವರನ್ನು ಬಂಧಿಸಿದ್ದಾರೆ.

‘ರಾಜಾಜಿನಗರದ ರಾಮಮಂದಿರ ನಿವಾಸಿಯಾದ ಮನೋಜ್, ಗುತ್ತಿಗೆದಾರ. ಆತನ ಸಹೋದರ ಜಯಂತ್‌, ವಾಟಾಳ್ ನಾಗರಾಜ್ ರಸ್ತೆಯಲ್ಲಿರುವಎಸ್.ವಿ. ಬಾರ್‌ನಲ್ಲಿ ಸ್ನೇಹಿತರ ಜತೆ ಮದ್ಯ ಕುಡಿದು ಹೊರಗಡೆ ಬಂದು ಮಾತನಾಡುತ್ತ ನಿಂತಿದ್ದ. ಅದೇ ಸ್ಥಳದಲ್ಲಿದ್ದ ಆದರ್ಶ್ ಮತ್ತು ಮುಖೇಶ್, ಆತನನ್ನು ಗುರಾಯಿಸಿದ್ದರು. ಅಷ್ಟಕ್ಕೆ ಎರಡೂ ಗುಂಪಿನ ನಡುವೆ ಮಾರಾಮಾರಿ ನಡೆದಿತ್ತು. ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಜಗಳದಿಂದ ಕೋಪಗೊಂಡಿದ್ದಆದರ್ಶ್, 10ಕ್ಕೂ ಹೆಚ್ಚು ಸಹಚರರ ಜೊತೆ ಭಾನುವಾರ ರಾತ್ರಿ 11.30 ಗಂಟೆ ಸುಮಾರಿಗೆ ಜಯಂತ್‌ನ ಮನೆಗೆ ನುಗ್ಗಿದ್ದ. ಮನೆಯಲ್ಲಿದ್ದ ಮನೋಜ್‌ ಜೊತೆ ಜಗಳ ತೆಗೆದಿದ್ದ.’

‘ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮನೋಜ್, ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದ. ಎದುರಾಳಿ ಗುಂಪು ಅಲ್ಲಿಂದ ಪರಾರಿಯಾಗಿತ್ತು. ಗುಂಡಿನ ಶಬ್ದ ಕೇಳಿದ್ದ ಸ್ಥಳೀಯರು, ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಗುಂಡು ಹಾರಿಸಿದ್ದು ಗೊತ್ತಾಯಿತು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.