ಪ್ರಾತಿನಿಧಿಕ ಚಿತ್ರ
ಬೆಂಗಳೂರು: ವಸತಿ, ಶೈಕ್ಷಣಿಕ, ವಾಣಿಜ್ಯ, ಕೈಗಾರಿಕೆ, ಆಸ್ಪತ್ರೆ ಮತ್ತು ಗೋದಾಮು ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಸಮಾಪನ ಪತ್ರ ಪಡೆಯುವ ನಿಯಮವನ್ನು ಸರಳಗೊಳಿಸಲಾಗಿದೆ.
ಈ ಅಧಿಕಾರವನ್ನು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಿರುವುದರಿಂದ ಕಟ್ಟಡಗಳ ಮಾಲೀಕರು ರಾಜಧಾನಿಗೆ ಅಲೆದಾಡುವುದು ತಪ್ಪಲಿದೆ.
ಇನ್ನು ಮುಂದೆ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಯು ತಮ್ಮ ವ್ಯಾಪ್ತಿಯಲ್ಲಿರುವ ಬಹುಮಹಡಿ ಕಟ್ಟಡವಲ್ಲದ, ಅಂದರೆ 21 ಮೀಟರ್‌ಗಿಂತ ಕಡಿಮೆ ಎತ್ತರ ಇರುವ ಕಟ್ಟಡಗಳ ಪರಿಶೀಲನೆ ನಡೆಸಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗೆ ವರದಿ ಸಲ್ಲಿಸುವರು. ಈ ವರದಿ ಪರಿಶೀಲನೆ ಬಳಿಕ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಸಂಬಂಧಪಟ್ಟ ಕಟ್ಟಡದ ಮಾಲೀಕರಿಂದ ನಿಗದಿತ ಶುಲ್ಕವನ್ನು ಪಾವತಿಸಿಕೊಂಡು, ಅಗ್ನಿ ಸುರಕ್ಷತಾ ಪತ್ರ ನೀಡಲಿದ್ದಾರೆ.
ಈ ಸಂಬಂಧ ಪೊಲೀಸ್ ಸಹಾಯಕ ಸೇವೆ ಮತ್ತು ಸಮನ್ವಯ ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ.
ಕಟ್ಟಡಗಳ ಎತ್ತರ 21 ಮೀಟರ್‌ಗಿಂತ ಜಾಸ್ತಿ ಇದ್ದರೆ ಅತಿ ಎತ್ತರದ ಕಟ್ಟಡಗಳೆಂದು, 21 ಮೀಟರ್‌ಗಿಂತ ಒಳಗೆ ಇದ್ದರೆ ಕಡಿಮೆ ಎತ್ತರದ ಕಟ್ಟಡಗಳೆಂದು 2023ರ ಆದೇಶದಲ್ಲಿ ವ್ಯಾಖ್ಯಾನಿಸಲಾಗಿದೆ. 15 ಮೀಟರ್‌ಗಿಂತ ಎತ್ತರದ ಕಟ್ಟಡಗಳನ್ನು ಪೊಲೀಸ್ ಮಹಾ ನಿರ್ದೇಶಕರು ಹಾಗೂ 15 ಮೀಟರ್‌ಗಿಂತ ಕಡಿಮೆ ಎತ್ತರದ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಪತ್ರವನ್ನು ಮುಖ್ಯ ಅಗ್ನಿಶಾಮಕ ಅಧಿಕಾರಿ ವಿತರಿಸುವ ವ್ಯವಸ್ಥೆ ಇದೆ. ಈ ಆದೇಶವಿದ್ದರೂ 15ರಿಂದ 21 ಮೀಟರ್ ಎತ್ತರವಿರುವ ಎಲ್ಲಾ ರೀತಿಯ ಕಟ್ಟಡಗಳ ಅಗ್ನಿ ಸುರಕ್ಷತಾ ಪತ್ರಕ್ಕೆ ಕಟ್ಟಡಗಳ ಮಾಲೀಕರು ಪೊಲೀಸ್ ಮಹಾ ನಿರ್ದೇಶಕರನ್ನು ಸಂಪರ್ಕಿಸಬೇಕಾಗಿತ್ತು.
‘ಈ ಪ್ರಕ್ರಿಯೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು. ಉದಾಹರಣೆಗೆ, ಸೊರಬ ತಾಲ್ಲೂಕಿನಲ್ಲಿ 15ರಿಂದ 21 ಮೀಟರ್ ಎತ್ತರವಿರುವ ಎಲ್ಲಾ ರೀತಿಯ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಸಮಾಪನ ಪತ್ರ ಪಡೆಯಲು ಕೇಂದ್ರ ಕಚೇರಿಗೆ ತೆರಳಬೇಕಿತ್ತು. 15 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಎಲ್ಲ ರೀತಿಯ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಪತ್ರ ಪಡೆಯಲು ಮುಖ್ಯ ಅಗ್ನಿ ಶಾಮಕ ಅಧಿಕಾರಿ ಇರುವ ಮಂಗಳೂರಿಗೆ ತೆರಳಬೇಕಿತ್ತು. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಯ ಜನರು ಪತ್ರ ಪಡೆಯಲು ಕಷ್ಟಪಡುತ್ತಿದ್ದರು. ಇದಕ್ಕಾಗಿ ತಿಂಗಳಿಗೂ ಹೆಚ್ಚು ಕಾಲ ಕಚೇರಿಗೆ ಅಲೆದಾಡಬೇಕಿತ್ತು’ ಎಂದು ಅಗ್ನಿ ಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಈ ಸಮಸ್ಯೆ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ 21 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಎಲ್ಲಾ ರೀತಿಯ ಕಟ್ಟಡಗಳನ್ನು ಪರಿಶೀಲನೆ ಮಾಡುವ ಅಧಿಕಾರವನ್ನು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗೆ ಹಾಗೂ ಅಗ್ನಿ ಸುರಕ್ಷತಾ ಸಲಹಾ ಪತ್ರ ವಿತರಿಸುವ ಅಧಿಕಾರವನ್ನು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗೆ ನೀಡಲಾಗಿದೆ. ಇದರಿಂದ ಸಾರ್ವಜನಿಕರು ಆಯಾ ಜಿಲ್ಲೆಯಲ್ಲಿ ಪಡೆಯಬಹುದಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.