ADVERTISEMENT

ಬೆಂಗಳೂರು ರಸ್ತೆ ಗುಂಡಿಗಳನ್ನು ಮುಚ್ಚಿ: ನಟ ನೀನಾಸಂ ಸತೀಶ್‌ ಟ್ವೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2022, 11:20 IST
Last Updated 31 ಅಕ್ಟೋಬರ್ 2022, 11:20 IST
   

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗುಂಡಿಗಳಿಂದಾಗಿ ಒಂದೆಡೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೆ, ಮತ್ತೊಂದೆಡೆ ಗುಂಡಿಗಳನ್ನು ತಪ್ಪಿಸುವ ವೇಳೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಈ ಬಗ್ಗೆ ನಟ ನೀನಾಸಂ ಸತೀಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್‌ 17ರಂದು ರಾಜಾಜಿನಗರದ ಲುಲು ಗ್ಲೋಬಲ್ ಮಾಲ್‌ ಎದುರು ರಸ್ತೆ ಗುಂಡಿ ತಪ್ಪಿಸುವಾಗ ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು, ಉಮಾದೇವಿ (42) ಎಂಬುವವರು ಮೃತಪಟ್ಟಿದ್ದರು. ಹೀಗಿರುವಾಗಲೇ, ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯ ಅಟ್ಟೂರು ಮುಖ್ಯರಸ್ತೆಯಲ್ಲಿ ಕಾರು ಹಾಗೂ ಬೈಕ್ ನಡುವೆ ಶನಿವಾರ ರಾತ್ರಿ ಅಪಘಾತ ಸಂಭವಿಸಿದ್ದು, ಬೈಕ್ ಹಿಂಬದಿ ಸವಾರ ಹರ್ಷದ್ (22) ಎಂಬುವರು ಮೃತಪಟ್ಟಿದ್ದಾರೆ. ಈ ಘಟನೆಗೂ ಹದಗೆಟ್ಟ ರಸ್ತೆಯೇ ಕಾರಣ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿಗಳ ಅವ್ಯವಸ್ಥೆ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರುವ ನೀನಾಸಂ ಸತೀಶ್‌, 'ಬೆಂಗಳೂರು ರಸ್ತೆ ಗುಂಡಿಗಳನ್ನ ಮುಚ್ಚಿ’ ಎಂದು ಬರೆದಿದ್ದಾರೆ. ಇದಕ್ಕೆ #BBMP ಹ್ಯಾಷ್‌ಟ್ಯಾಗ್‌ ಅನ್ನೂ ಅವರು ಬಳಸಿದ್ದಾರೆ.

ADVERTISEMENT

ಸತೀಶ್‌ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹಲವರು ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ಗುಂಡಿಯಿಂದ ಅಪಘಾತವಾಗಿದ್ದ ಪ್ರಕರಣಗಳು

l 2022 ಅಕ್ಟೋಬರ್ 17: ರಾಜಾಜಿನಗರದ ಲುಲು ಗ್ಲೋಬಲ್ ಮಾಲ್‌ ಎದುರು ರಸ್ತೆ ಗುಂಡಿ ತಪ್ಪಿಸುವಾಗ ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು, ಉಮಾದೇವಿ (42) ಅವರು ಮೃತಪಟ್ಟಿದ್ದರು

l 2022ರ ಮಾರ್ಚ್ 13: ಎಂ.ಎಸ್. ಪಾಳ್ಯದ ಮುನೇಶ್ವರ ಬಡಾವಣೆಯಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್ ಉರುಳಿಬಿದ್ದಿದ್ದು, ಸವಾರ ಅಶ್ವಿನ್ ಜುಗ್ಡೆ (27) ಮೃತಪಟ್ಟಿದ್ದರು

l 2022ರ ಜನವರಿ 29: ಬ್ಯಾಡರಹಳ್ಳಿ ಮುಖ್ಯರಸ್ತೆಯ ಅಂಜನಾನಗರ ವೃತ್ತದಲ್ಲಿ ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿ ಶಿಕ್ಷಕಿ ಶರ್ಮಿಳಾ (38) ಎಂಬುವರು ಮೃತಪಟ್ಟಿದ್ದರು

l 2021ರ ಸೆಪ್ಟೆಂಬರ್ 7: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಗುಂಡಿಯಿಂದಾಗಿ ದ್ವಿಚಕ್ರ ವಾಹನ ಉರುಳಿ ಬಿದ್ದಿದ್ದು, ಮೈಕೊ ಲೇಔಟ್‌ನ ಬಿಸ್ಮಿಲ್ಲಾ ನಗರದ ಸವಾರ ಖುರ್ಷಿದ್ ಅಹ್ಮದ್ (65) ಎಂಬುವರು ಮೃತಪಟ್ಟಿದ್ದರು

l 2021ರ ನ. 27: ಥಣಿಸಂದ್ರ ಮುಖ್ಯರಸ್ತೆಯಲ್ಲಿ ರಸ್ತೆ ಗುಂಡಿಯಲ್ಲಿ ಆಯತಪ್ಪಿ ಬಿದ್ದ ಸ್ಕೂಟರ್ ಸವಾರ ಅಜೀಂ ಅಹ್ಮದ್‌ (21) ಎಂಬುವರಿಗೆ ಗೂಡ್ಸ್‌ ವಾಹನವೊಂದು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಜೀಂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.