ADVERTISEMENT

ಸಮನ್ವಯದ ಕೊರತೆಯಿಂದಲೇ ಪ್ರವಾಹ: BBMP, ಜಲಮಂಡಳಿ ಅಧಿಕಾರಿಗಳಿಗೆ ಲೋಕಾಯುಕ್ತ ತರಾಟೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 22:27 IST
Last Updated 23 ಮೇ 2025, 22:27 IST
ವಿಚಾರಣೆ ವೇಳೆ ಅಧಿಕಾರಿಗಳು ಲೋಕಾಯುಕ್ತರಿಗೆ ವಿವರಣೆ ನೀಡಿದರು
ವಿಚಾರಣೆ ವೇಳೆ ಅಧಿಕಾರಿಗಳು ಲೋಕಾಯುಕ್ತರಿಗೆ ವಿವರಣೆ ನೀಡಿದರು   

ಬೆಂಗಳೂರು: ಬೆಂಗಳೂರಿನಲ್ಲಿ ತೀವ್ರ ಮಳೆಯಾದಾಗ ಪ್ರವಾಹ ಸ್ಥಿತಿ ತಲೆದೋರಲು ಬಿಬಿಎಂಪಿ, ಜಲಮಂಡಳಿ ಮಧ್ಯೆ ಸಮನ್ವಯ ಇಲ್ಲದೇ ಇರುವುದೇ ಕಾರಣ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಿಲ್ಕ್‌ ಬೋರ್ಡ್‌ ವೃತ್ತ, ಸಾಯಿ ಬಡಾವಣೆ, ಪಣತ್ತೂರು ರೈಲ್ವೆ ಕೆಳಸೇತುವೆ ಬಳಿ ಪ್ರವಾಹ ಸ್ಥಿತಿ ಉಂಟಾಗುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತವು ಬಿಬಿಎಂಪಿ, ಜಲಮಂಡಳಿ, ಬಿಎಂಆರ್‌ಸಿಎಲ್‌ ಮತ್ತು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದರು.

‘ಬಿಬಿಎಂಪಿಯವರು ಎಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ, ಜಲಮಂಡಳಿಯವರು ಎಲ್ಲಿ ಅಗೆಯುತ್ತಿದ್ದಾರೆ ಎಂಬುದರ ಬಗ್ಗೆ ಪರಸ್ಪರರಿಗೆ ಮಾಹಿತಿಯೇ ಇರುವುದಿಲ್ಲ. ಬಿಎಂಆರ್‌ಸಿಎಲ್‌ನವರು, ರೈಲ್ವೆಯವರು ರಾಜಕಾಲುವೆ ಮುಚ್ಚಿರುವುದೂ ಇವರಿಗೆ ಗೊತ್ತಾಗುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಸಿಲ್ಕ್‌ ಬೋರ್ಡ್‌ ವೃತ್ತದಲ್ಲಿ ಬಿಎಂಆರ್‌ಸಿಎಲ್‌ನವರು ಮೆಟ್ರೊ ನಿಲ್ದಾಣ ಕಾಮಗಾರಿ ನಡೆಸುತ್ತಿದ್ದು, ರಾಜಕಾಲುವೆಯಲ್ಲಿ ಪಿಲ್ಲರ್‌ ನಿರ್ಮಿಸಿದ್ದಾರೆ. ಇದರಿಂದ ರಾಜಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಈ ಕಾರಣದಿಂದಲೇ ಪ್ರವಾಹ ತಲೆದೋರುತ್ತಿದೆ. ಈ ಬಗ್ಗೆ ಜಲಮಂಡಳಿಯವರಾಗಲೀ, ಬಿಬಿಎಂಪಿಯವರಾಗಲೀ ಏಕೆ ಕ್ರಮ ತೆಗೆದುಕೊಂಡಿಲ್ಲ’ ಎಂದು ಲೋಕಾಯುಕ್ತರು ಅಧಿಕಾರಿಗಳನ್ನು ಪ್ರಶ್ನಿಸಿದರು.

ನೀರು ಸರಾಗವಾಗಿ ಹರಿಯಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ವಿವರಣೆ ನೀಡಿದಾಗ ಲೋಕಾಯುಕ್ತರು, ‘ಪ್ರವಾಹ ತಲೆದೋರುವವರೆಗೂ ಇಂತಹ ಸಾಮಾನ್ಯ ಸಂಗತಿಗಳು ನಿಮಗೆ ಏಕೆ ಅರ್ಥವಾಗುವುದಿಲ್ಲ. ಕಾಮಗಾರಿ ನಡೆಸುತ್ತಿರುವ ಬಿಎಂಆರ್‌ಸಿಎಲ್‌ನ ಎಂಜಿನಿಯರ್‌ ಅನ್ನು ಕರೆಸಿ, ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಅವರಿಗೆ ಸೂಚಿಸಿ. ಈ ಸಮಸ್ಯೆಯನ್ನು ಬಗೆಹರಿಸಿ ಜೂನ್‌ 3ರ ಒಳಗೆ ವರದಿ ಸಲ್ಲಿಸಿ’ ಎಂದು ತಾಕೀತು ಮಾಡಿದರು.

‘ಪಣತ್ತೂರು ರೈಲ್ವೆ ಕೆಳಸೇತುವೆ ಪಕ್ಕದಲ್ಲೇ, ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಮತ್ತೊಂದು ಕೆಳಸೇತುವೆ ನಿರ್ಮಿಸುತ್ತಿದೆ. ಅಲ್ಲಿ ಹಾದುಹೋಗುವ ಮಳೆ ನೀರಿನ ಕಾಲುವೆಯನ್ನು ಮುಚ್ಚಿಹಾಕಿದೆ. ಜತೆಗೆ ಪಣತ್ತೂರು ಕೆರೆಯ ಹೊರಕಾಲುವೆಯನ್ನೂ ಮುಚ್ಚಿ ಹಾಕಿದೆ.  ಈ ಕಾರಣದಿಂದಲೇ ಮಳೆಬಂದಾಗ ನೀರು ನಿಂತು, ಮನೆಗಳಿಗೆ ನುಗ್ಗುತ್ತಿದೆ. ಮಳೆ ನೀರಿನ ಕಾಲುವೆಯನ್ನು ಶೀಘ್ರವೇ ಸರಿಪಡಿಸಿ, ವರದಿ ನೀಡಿ’ ಎಂದು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿಯ ಮೇಲ್ವಿಚಾರಣೆ ನಡೆಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಗೆದ್ದಲಹಳ್ಳಿ ರೈಲ್ವೆ ಕೆಳಕಾಲುವೆ ಕಿರಿದಾಗಿರುವ ಕಾರಣದಿಂದಲೇ ಮಳೆ ಬಂದಾಗ, ರಾಜಕಾಲುವೆಯ ನೀರು ಹಿಮ್ಮುಖವಾಗಿ ಹರಿದು ಎಚ್‌ಬಿಆರ್‌ ಬಡಾವಣೆ, ಸಾಯಿ ಬಡಾವಣೆಗಳಲ್ಲಿ ಪ್ರವಾಹ ಸ್ಥಿತಿ ತಲೆದೋರುತ್ತಿದೆ. ಈ ಸಮಸ್ಯೆಯನ್ನು ಬೇಗ ಬಗೆಹರಿಸಿ’ ಎಂದು ಲೋಕಾಯುಕ್ತರು ಹೇಳಿದರು.

ಆಗ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್, ‘ರೈಲ್ವೆ ಕೆಳಕಾಲುವೆ ವಿಸ್ತರಣೆಗೆ ರೈಲ್ವೆ ಇಲಾಖೆ ಅನುಮತಿ ನೀಡಿದೆ. ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು. ಅದಕ್ಕೆ ಲೋಕಾಯುಕ್ತರು, ‘ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ, ವರದಿ ಸಲ್ಲಿಸಿ’ ಎಂದರು.

ಶುಕ್ರವಾರದ ವಿಚಾರಣೆ ವೇಳೆ ಅಹವಾಲು ಸಲ್ಲಿಸಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿತ್ತು. ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ರಾಜಕಾಲಲುವೆ ಒತ್ತುವರಿಯಾಗಿರುವ ಬಗ್ಗೆ ಹಲವರು ದೂರು ಸಲ್ಲಿಸಿದರು. ಅದಕ್ಕೆ ಪ್ರತಿಯಾಗಿ ಬಿಬಿಎಂಪಿ ಅಧಿಕಾರಿಗಳು, ‘ಒತ್ತುವರಿ ತೆರವು ಮಾಡಿ, ರಾಜಕಾಲುವೆಯ ತಡೆಗೋಡೆ ನಿರ್ಮಿಸುತ್ತೇವೆ ಮಾನ್ಯತಾ ಟೆಕ್‌ಪಾರ್ಕ್‌ ತಿಳಿಸಿದೆ. ಇದಕ್ಕೆ 90 ದಿನಗಳ ಕಾಲಾವಕಾಶ ನೀಡಲಾಗಿದೆ’ ಎಂದು ವಿವರಣೆ ನೀಡಿದರು.

‘ಅವೈಜ್ಞಾನಿಕ ರಾಜಕಾಲುವೆ’

‘ನಗರದಲ್ಲಿ ಹಲವೆಡೆ ಹೊಸದಾಗಿ ರಾಜಕಾಲುವೆಗಳನ್ನು ನಿರ್ಮಿಸಲಾಗಿದೆ. ಆದರೆ ಅವು ಅವೈಜ್ಞಾನಿಕವಾಗಿ ಇರುವುದರಿಂದಲೇ ಕೋರಮಂಗಲ ಮಹದೇವಪುರ ವ್ಯಾಪ್ತಿಯಲ್ಲಿ ಮಳೆ ಬಂದಾಗ ಪ್ರವಾಹ ಸ್ಥಿತಿ ಉಂಟಾಗುತ್ತಿದೆ’ ಎಂದು ಹಲವು ಸಾರ್ವಜನಿಕರು ಲೋಕಾಯುಕ್ತರಿಗೆ ದೂರಿತ್ತರು. ‘ರಸ್ತೆಗಿಂತ ಹೆಚ್ಚು ಎತ್ತರವಾಗಿ ರಾಜಕಾಲುವೆಗಳ ತಡೆಗೋಡೆ ನಿರ್ಮಿಸಲಾಗಿದೆ. ರಸ್ತೆಯಲ್ಲಿನ ನೀರು ರಾಜಕಾಲುವೆಗೆ ಹೋಗಲು ಆ ತಡೆಗೋಡೆಗಳೇ ಅಡ್ಡಿಯಾಗಿವೆ. ನೀರು ರಾಜಕಾಲುವೆಗೆ ಹೋಗಲು ಕಿಂಡಿಗಳನ್ನೂ ನಿರ್ಮಿಸಿಲ್ಲ’ ಎಂದರು. ಈ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದ ಲೋಕಾಯುಕ್ತರು ‘ತಡೆಗೋಡೆ ನಿರ್ಮಾಣದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿ. ನೀರು ಹರಿದುಹೋಗಲು ಅನುವಾಗುವಂತೆ ಇಳಿಜಾರುಗಳನ್ನು ಕಿಂಡಿಗಳನ್ನು ನಿರ್ಮಿಸಿ’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.