
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಮೊದಲ ಬಾರಿಗೆ ಕಬ್ಬನ್ ಉದ್ಯಾನದಲ್ಲಿ ನವೆಂಬರ್ 27ರಿಂದ ಡಿಸೆಂಬರ್ 7ರವರೆಗೆ ಪುಷ್ಪ ಪ್ರದರ್ಶನ ಆಯೋಜಿಸಲು ಸಿದ್ಧತೆ ನಡೆದಿದೆ.
ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯು ಲಾಲ್‌ಬಾಗ್‌ನಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿತ್ತು. ಕಬ್ಬನ್ ಉದ್ಯಾನದಲ್ಲಿ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಪುಷ್ಪ ಪ್ರದರ್ಶನದ ಜೊತೆಗೆ ಕಲೆ, ಸಂಸ್ಕೃತಿಯ ಹಬ್ಬ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ತೋಟಗಾರಿಕೆ ಇಲಾಖೆ ವಿವಿಧ ಬಗೆಯ ಆಲಂಕಾರಿಕ, ದೇಶಿ–ವಿದೇಶಿ ಹೂಗಳ ಕುಂಡಗಳನ್ನು ಸಿದ್ಧ ಮಾಡಿಕೊಳ್ಳುತ್ತಿದೆ. ಪುಷ್ಪಗಳಲ್ಲಿ ಪ್ರಾಣಿಗಳ ಕಲಾಕೃತಿಗಳನ್ನು ರಚಿಸಿ, ಮಕ್ಕಳನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುತ್ತಿದೆ.
‘20 ಸಾವಿರದಿಂದ 25 ಸಾವಿರ ಹೂ ಕುಂಡಗಳನ್ನು ಕಬ್ಬನ್ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್ ಹತ್ತಿರ, ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಮುಂಭಾಗದಲ್ಲಿ ಹಾಗೂ ಬಾಲಭವನದ ಆವರಣದಲ್ಲಿ ಜೋಡಿಸಿ ಇಡಲಾಗುತ್ತದೆ. ಈ ಪುಷ್ಪ ಪ್ರದರ್ಶನ 11 ದಿನ ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಇರಲಿದೆ. ವಯಸ್ಕರಿಗೆ ಸುಮಾರು ₹50 ಹಾಗೂ ಮಕ್ಕಳಿಗೆ ₹10 ಪ್ರವೇಶ ಶುಲ್ಕ ನಿಗದಿಪಡಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಪುಷ್ಪ ಪ್ರದರ್ಶನದ ಜೊತೆಗೆ ಸಾಂಸ್ಕೃತಿಕ ಕಲೆಗಳು, ಶಾಸ್ತ್ರೀಯ ನೃತ್ಯ ಪ್ರದರ್ಶನ, ಶಾಸ್ತ್ರೀಯ ಸಂಗೀತ ಕಛೇರಿಗಳು, ಜಾನಪದ ಹಾಡು, ನೃತ್ಯ, ಡೊಳ್ಳು ಕುಣಿತ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಟ್ಟು 100ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಇದರಲ್ಲಿ ಆಹಾರ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ಉದ್ಯಾನಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಈ ಪ್ರದರ್ಶನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ (ಕಬ್ಬನ್ ಉದ್ಯಾನ) ಜಿ. ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಉದ್ಯಾನದ ಎರಡು- ಮೂರು ಭಾಗಗಳಲ್ಲಿ ಹೂವಿನ ಕುಂಡಗಳ ಪ್ರದರ್ಶನ ನಡೆಯಲಿದೆ. ಇಂಡೊ–ಅಮೆರಿಕನ್ ಹೈಬ್ರಿಡ್ ಕಂಪನಿ, ತಿರುಮಲ ನರ್ಸರಿಯವರು ಆಕರ್ಷಕ ಹೂವಿನ ಕುಂಡುಗಳನ್ನು ಜೋಡಿಸಲಿದ್ದಾರೆ. ಕರ್ನಾಟಕ ಶಿಲ್ಪಾ ಕಲಾ ಅಕಾಡೆಮಿಯಿಂದ ವಾಸ್ತುಶಿಲ್ಪ, ಕಲ್ಲಿನ ಮೂರ್ತಿಗಳು, ಬಿಎಸ್‌ಎಫ್ ಸಿಬ್ಬಂದಿ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನೂ ನೀಡಲಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ತಿಳಿಸಿದರು.
‘ಕಬ್ಬನ್ ಉದ್ಯಾನಕ್ಕೆ ಮೆಟ್ರೊ ಸಂಪರ್ಕ ಇದ್ದು, ಪ್ರದರ್ಶನ ವೀಕ್ಷಣೆಗೆ ಹೆಚ್ಚು ಮಂದಿ ಬರುವ ಭರವಸೆ ಇದೆ. ಹೋದ ವರ್ಷ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಈ ಬಾರಿ ತೋಟಗಾರಿಕೆ ಇಲಾಖೆಯಿಂದ ಅಂದಾಜು ₹38 ಲಕ್ಷ ವೆಚ್ಚದಲ್ಲಿ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ’ ಎಂದು ವಿವರಿಸಿದರು.
‘ಒಂದು ವಾರದಲ್ಲಿ ರೂಪುರೇಷ ಅಂತಿಮ’
‘ಕಬ್ಬನ್ ಉದ್ಯಾನದಲ್ಲಿ ಆಯೋಜಿಸುತ್ತಿರುವ ಪುಷ್ಪ ಪ್ರದರ್ಶನದಲ್ಲಿ ಚಿಣ್ಣರನ್ನು ಆಕರ್ಷಿಸುವ ಹೂವಿನ ಕಲಾಕೃತಿಗಳ ಮಾದರಿಗಳನ್ನು ರಚಿಸಲಾಗುತ್ತದೆ. ವಾರಾಂತ್ಯದಲ್ಲಿ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ನೃತ್ಯ ಪ್ರದರ್ಶನ, ಸಂಗೀತ ಕಛೇರಿಗಳನ್ನು ನಡೆಸಲಾಗುತ್ತಿದೆ. ಈ ಪುಷ್ಪ ಪ್ರದರ್ಶನದ ರೂಪುರೇಷಗಳನ್ನು ಮುಂದಿನ ವಾರದಲ್ಲಿ ಅಂತಿಮಗೊಳಿಸಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಆರ್. ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.