
ಬೆಂಗಳೂರು: ವಿವಿಧ ಮಾದರಿಯ ಬಣ್ಣ ಬಣ್ಣದ ಸೀರೆಗಳಲ್ಲಿ ಕಂಗೊಳಿಸಿದ ವಿದ್ಯಾರ್ಥಿನಿಯರು, ನೃತ್ಯ–ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮನೆಗಳಿಂದ ತಂದಿದ್ದ ಆಹಾರೋತ್ಪನ್ನ ಹಾಗೂ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಜತೆಗೆ, ತರಕಾರಿಗಳನ್ನು ಒಳಗೊಂಡ ಕಿರು ಮಾರುಕಟ್ಟೆಯನ್ನೇ ರೂಪಿಸಿದ್ದರು.
ಈ ದೃಶ್ಯ ಕಂಡುಬಂದದ್ದು ಬಸವನಗುಡಿಯ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ ಹಾಗೂ ಬಿ.ಎಂ.ಎಸ್. ಮಹಿಳಾ ಪದವಿಪೂರ್ವ ಮಹಾವಿದ್ಯಾಲಯ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾನಪದ ಜಾತ್ರೆಯಲ್ಲಿ.
ಮಹಾವಿದ್ಯಾಲಯದ ಆವರಣವು ಗ್ರಾಮೀಣ ಸೊಗಡನ್ನು ಅನಾವರಣ ಮಾಡಿತ್ತು. ವಿದ್ಯಾರ್ಥಿಗಳಿಗೆ ಜಾನಪದ ಸೊಗಡು ಪರಿಚಯಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಜಾತ್ರೆಯಲ್ಲಿ, ವಿದ್ಯಾರ್ಥಿನಿಯರ ಜತೆಗೆ ಪ್ರಾಧ್ಯಾಪಕರು ಕೂಡ ಸಂಭ್ರಮದ ಭಾಗವಾಗಿದ್ದರು.
ಜಾನಪದ ಕಲಾ ತಂಡಗಳು ಕಾಲೇಜಿನ ಪ್ರವೇಶ ದ್ವಾರದಲ್ಲಿಯೇ ಹೆಜ್ಜೆ ಹಾಕುವ ಮೂಲಕ ಅತಿಥಿಗಳನ್ನು ಬರಮಾಡಿಕೊಂಡವು. ಇದಕ್ಕೂ ಮೊದಲು ಕಾಲೇಜಿನ ಸುತ್ತ ನಡೆದ ಮೆರವಣಿಗೆ ಗಮನಸೆಳೆಯಿತು. ಜಾನಪದ ಸೊಗಡಿನ ವೇಷಭೂಷಣ, ಆಟೋಟ ಸ್ಪರ್ಧೆಗಳು, ಆಹಾರ ಮಳಿಗೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಯ ಮೆರುಗು ಹೆಚ್ಚಿಸಿದವು.
ಗಾಯಕ ಕಂಬದರಂಗಯ್ಯ ಅವರು ವಿವಿಧ ಜಾನಪದ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಜಾನಪದ ಕಲಾವಿದರ ಜತೆಗೆ ವಿದ್ಯಾರ್ಥಿನಿಯರು, ಸೋಲಿಗರ ಕುಣಿತ, ಸುಗ್ಗಿ ಕುಣಿತ, ಜೋಗತಿ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿ ವಿವಿಧ ಜಾನಪದ ಕಲಾ ಪ್ರಕಾರಗಳಿಗೆ ಹೆಜ್ಜೆ ಹಾಕಿದರು.
ಬಿ.ಎಂ.ಎಸ್.ಇ.ಟಿ. ಹಾಗೂ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಅಧ್ಯಕ್ಷೆ ಬಿ.ಎಸ್. ರಾಗಿಣಿ ನಾರಾಯಣ್ ಅವರು ಜಾನಪದ ಜಾತ್ರೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿ.ಎಂ.ಎಸ್. ಶಿಕ್ಷಣ ದತ್ತಿಯ ಧರ್ಮದರ್ಶಿ ಅವಿರಾಮ್ ಶರ್ಮ, ನಿರ್ದೇಶಕ ರಾಘವನ್ ಆರ್.ಎ., ಬಿ.ಎಂ.ಎಸ್. ಟ್ರಸ್ಟ್‌ನ ಉಪ ನಿರ್ದೇಶಕ ಪ್ರಸಾದ್ ವಿ., ಬಿ.ಎಂ.ಎಸ್. ಆಸ್ಪತ್ರೆ ಟ್ರಸ್ಟ್‌ನ ಅಧ್ಯಕ್ಷ ಗೌತಮ್ ವಿ. ಕಲತ್ತೂರ್, ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ರಘುಕುಮಾರ ಎನ್., ಬಿ.ಎಂ.ಎಸ್. ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಸುರೇಶ ಪಿ.ಎಚ್. ಹಾಗೂ ಉಪ ಪ್ರಾಂಶುಪಾಲೆ ಸುನೀತ ಕೆ. ಉಪಸ್ಥಿತರಿದ್ದರು.
ನಮ್ಮ ನಾಡಿನ ಶ್ರೀಮಂತ ಜನಪದ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಜಾನಪದ ಜಾತ್ರೆ ಆಚರಿಸುತ್ತಿದ್ದೇವೆ. ಜನಪದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕುರಘುಕುಮಾರ ಎನ್. ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ
‘ಜಾನಪದ ಜ್ಞಾನದ ಶಾಲೆ’
‘ಜಾನಪದವು ಜೀವನವಿಧಾನ ಮತ್ತು ಜ್ಞಾನದ ಶಾಲೆಯಾಗಿದೆ. ಜ್ಞಾನ ಎನ್ನುವುದು ಅಕ್ಷರದಲ್ಲಿ ಮಾತ್ರ ಇರಲಿದೆ ಎನ್ನುವುದು ತಪ್ಪು ಕಲ್ಪನೆ. ಅನಕ್ಷರಸ್ತರು ಸೃಷ್ಟಿಸಿದ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಜಾನಪದದಲ್ಲಿ ಜ್ಞಾನ ಚಿತ್ರಕಲೆ ಚಿಕಿತ್ಸೆ ಎಲ್ಲವೂ ಇದೆ. ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಯಲು ಜಾನಪದ ಜಾತ್ರೆಗಳು ಅಗತ್ಯ’ ಎಂದು ನಿವೃತ್ತ ಪ್ರಾಧ್ಯಾಪಕರೂ ಆಗಿರುವ ವಾಗ್ಮಿ ಪ್ರೊ.ಕೃಷ್ಣೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.