ADVERTISEMENT

700 ಬೀದಿನಾಯಿಗಳಿಗೆ ನಿತ್ಯ ಆಹಾರ

ಆಹಾರ ತಯಾರಿಗೆ ಶೆಡ್‌ ನಿರ್ಮಾಣ– ಮಾಸಿಕ ₹1.5 ಲಕ್ಷ ಖರ್ಚು

ಮನೋಹರ್ ಎಂ.
Published 1 ಸೆಪ್ಟೆಂಬರ್ 2020, 21:09 IST
Last Updated 1 ಸೆಪ್ಟೆಂಬರ್ 2020, 21:09 IST
ಬೀದಿನಾಯಿಗಳಿಗೆ ಆಹಾರ ನೀಡುತ್ತಿರುವ ಮಿನು ಸಿಂಗ್
ಬೀದಿನಾಯಿಗಳಿಗೆ ಆಹಾರ ನೀಡುತ್ತಿರುವ ಮಿನು ಸಿಂಗ್   

ಬೆಂಗಳೂರು: ನಗರದ ಮಹಿಳೆಯೊಬ್ಬರು ತಮ್ಮ ಸ್ವಂತ ಖರ್ಚಿನಿಂದ 700 ಬೀದಿನಾಯಿಗಳಿಗೆ ನಿತ್ಯ ಆಹಾರ ಬಡಿಸಿ ಅವುಗಳನ್ನು ಪೋಷಿಸುತ್ತಿದ್ದಾರೆ.

ಬೆಳ್ಳಂದೂರಿನ ಇಬ್ಬಲೂರು ನಿವಾಸಿಯಾಗಿರುವ 39 ವರ್ಷದ ಮಿನು ಸಿಂಗ್ ಅವರು 11 ವರ್ಷಗಳಿಂದ ಬೀದಿನಾಯಿಗಳಿಗೆ ಆಹಾರ ಪೂರೈಸುವುದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.

ಜಾರ್ಖಂಡ್‍ನಲ್ಲಿ ಹುಟ್ಟಿದ ಇವರು, ವಿಶಾಖಪಟ್ಟಣದಲ್ಲಿ ಜೀವ ವಿಜ್ಞಾನ ಪದವಿ ಹಾಗೂ ಪುಣೆಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರಿಗೆ ಚಿಕ್ಕಂದಿನಿಂದಲೂ ಬೀದಿ ನಾಯಿಗಳೆಂದರೆ ಹೆಚ್ಚು ಕಾಳಜಿ.

ADVERTISEMENT

‘ಚಿಕ್ಕ ವಯಸ್ಸಿನಲ್ಲೇ ಬೀದಿನಾಯಿಗಳೊಂದಿಗೆ ಹೆಚ್ಚು ನಂಟು ಬೆಳೆಸಿಕೊಂಡೆ. ಮನೆಯಲ್ಲಿ ಸದಾ ಬೈಯುತ್ತಿದ್ದರು. ಅವರ ಕಣ್ತಪ್ಪಿಸಿ ನಾಯಿಗಳಿಗೆ ಆಹಾರ ನೀಡುತ್ತಿದ್ದೆ. ಆ ಪ್ರವೃತ್ತಿಯೇ ಇಂದು ನಾಯಿಗಳನ್ನು ಪೋಷಿಸಲು ಪ್ರೇರಣೆಯಾಯಿತು' ಎನ್ನುತ್ತಾರೆ ಮಿನು.

'ಸಾಮಾನ್ಯವಾಗಿ ಹೈಬ್ರಿಡ್ ನಾಯಿಗಳನ್ನು ಎಲ್ಲರೂ ಮೆಚ್ಚುತ್ತಾರೆ. ಆದರೆ, ಬೀದಿನಾಯಿಗಳೆಂದರೆ ತಾರತಮ್ಯ ಮಾಡುತ್ತಾರೆ. ಪ್ರಾಣಿ ಎಂದ ಮೇಲೆ ಎಲ್ಲವೂ ಒಂದೇ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಬೀದಿನಾಯಿಗಳಿಗೆ ಸರಿಯಾದ ಪೋಷಣೆ ಸಿಗುವುದಿಲ್ಲ. ಹಸಿವಿನಿಂದ ಅವು ಜನರನ್ನು ಹಿಂಬಾಲಿಸುತ್ತವೆ. ಇದನ್ನೇ ಜನ ತಪ್ಪಾಗಿ ತಿಳಿದು, ಅವುಗಳನ್ನು ದೂಷಿಸುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದರು.

'ಮೊದಲಿಗೆ 50 ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯ ಆರಂಭಿಸಿದೆ. ಪ್ರಸ್ತುತ ಬೆಳ್ಳಂದೂರು, ಇಬ್ಬಲೂರು, ಅಗರ ಹಾಗೂ ಸರ್ಜಾಪುರ ರಸ್ತೆಯಲ್ಲಿರುವ 700 ಬೀದಿನಾಯಿಗಳಿಗೆ ನಿತ್ಯ ಆಹಾರ ಪೂರೈಕೆಯಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆ ತನಕ ಆಹಾರ ತಯಾರಿ ನಡೆಯುತ್ತದೆ. ಬೈಕ್‍ನಲ್ಲಿ ತೆರಳಿ ಸಂಜೆ 7ರಿಂದ ರಾತ್ರಿ 12ರವರೆಗೆ ನಾಯಿಗಳಿಗೆ ಊಟ ಬಡಿಸಿ ಬರುತ್ತೇವೆ' ಎಂದು ವಿವರಿಸಿದರು.

'ಆಹಾರ ತಯಾರಿಗೆ ಒಂದು ಶೆಡ್ ನಿರ್ಮಿಸಿದ್ದೇವೆ. ಸಹಾಯಕ್ಕಾಗಿ ಇಬ್ಬರು ಹುಡುಗರನ್ನು ನೇಮಿಸಿಕೊಂಡಿದ್ದೇನೆ. ಆಹಾರಕ್ಕಾಗಿ ಮಾಸಿಕ ₹1.5 ಲಕ್ಷ ಖರ್ಚಾಗುತ್ತಿದೆ. ಇದರಲ್ಲಿ ಕನಿಷ್ಠ ಶೇ 70ರಷ್ಟು ನಾನು ಭರಿಸುತ್ತೇನೆ. ನನ್ನ ಕುಟುಂಬದ ಸದಸ್ಯರೂ ಕೈಜೋಡಿಸುತ್ತಾರೆ. ಆಹಾರ ನೀಡುವುದನ್ನು ಗಮನಿಸುವ ಕೆಲವು ಜನ ದೇಣಿಗೆ ನೀಡುತ್ತಾರೆ. ಪ್ರಾಣಿ ವೈದ್ಯರಿಂದ ನಾಯಿಗಳಿಗೆ ತುರ್ತು ಚಿಕಿತ್ಸೆ ನೀಡುವುದನ್ನು ಕಲಿತು, ನಾಯಿಗಳ ಆರೋಗ್ಯ ರಕ್ಷಣೆಯೂ ಮಾಡುತ್ತೇನೆ' ಎಂದು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.