ಬೆಂಗಳೂರು: ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ವಿಶೇಷ ಗಸ್ತು ವ್ಯವಸ್ಥೆ ಜಾರಿಗೆ ತರಲಾಗಿದೆ. ಪಿಎಸ್‌ಐ ಶ್ರೇಣಿಯ ಅಧಿಕಾರಿಗಳು ಕಾಲ್ನಡಿಗೆ ಮೂಲಕ ಗಸ್ತು ನಡೆಸಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
‘ನಗರದಾದ್ಯಂತ ಬೆಳಿಗ್ಗೆ ಹಾಗೂ ಸಂಜೆ ಇ–ಬೀಟ್ ವ್ಯವಸ್ಥೆಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹೊಯ್ಸಳ ಹಾಗೂ ಚೀತಾ ವಾಹನಗಳಲ್ಲಿ ಸಿಬ್ಬಂದಿ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗರಿಕರ ನಂಬಿಕೆ ಬಲಪಡಿಸಲು ಹಾಗೂ ಬಡಾವಣೆಗಳಲ್ಲಿ ಪೊಲೀಸ್ ಉಪಸ್ಥಿತಿ ಹೆಚ್ಚಿಸಲು ಬೀಟ್ ಸಿಬ್ಬಂದಿಯ ಜತೆಗೆ ಹೊಯ್ಸಳ ಸಿಬ್ಬಂದಿ, ಚೀತಾ ವಾಹನದ ಸಿಬ್ಬಂದಿ ಹಾಗೂ ಪಿಎಸ್ಐ ಶ್ರೇಣಿಯ ಅಧಿಕಾರಿಗಳು ಕಾಲ್ನಡಿಗೆ ಮೂಲಕ ಗಸ್ತು ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
‘ಪ್ರತಿದಿನ ಸಂಜೆ, ವಾರಾಂತ್ಯದ ದಿನಗಳು, ಸೂಕ್ಷ್ಮ ಪ್ರದೇಶಗಳು, ಪ್ರಾರ್ಥನಾ ಮಂದಿರಗಳು, ಮಾಲ್‌ಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಹೆಚ್ಚಿನ ದಟ್ಟಣೆ ಕಂಡುಬರುತ್ತಿದೆ. ಈ ಸ್ಥಳಗಳಲ್ಲಿ ಕಾಲ್ನಡಿಗೆ ಮೂಲಕ ಸಿಬ್ಬಂದಿ ಗಸ್ತು ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಯಾವುದೇ, ಘರ್ಷಣೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ತಕ್ಷಣವೇ ಸ್ಪಂದಿಸುವಂತೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ತಮ್ಮ ವ್ಯಾಪ್ತಿಯ ಕುಂದುಕೊರತೆಗಳನ್ನು ತಿಳಿಸಬಹುದು’ ಎಂದರು.
‘ರೌಡಿ ಶೀಟರ್‌ಗಳು, ರೂಢಿಗತ ಆರೋಪಿಗಳು, ಯಾವ ಅವಧಿ ಹಾಗೂ ಯಾವ ಪ್ರದೇಶಗಳಲ್ಲಿ ಹೆಚ್ಚಾಗಿ ಅಪರಾಧ ಕೃತ್ಯಗಳು ನಡೆಯುತ್ತಿವೆ ಎನ್ನುವ ಮಾಹಿತಿಯು ಠಾಣಾಧಿಕಾರಿಗಳು ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳಿಗೆ ಇರಬೇಕು. ಅಂತಹ ಪ್ರದೇಶದಲ್ಲಿ ಗಸ್ತು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.