ಬೆಂಗಳೂರು: ನಗರದಲ್ಲಿ ನಾಗರಿಕರಿಗೆ ಸುರಕ್ಷಿತ ಮತ್ತು ನಡೆಯಲು ಯೋಗ್ಯವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪಶ್ಚಿಮ ವಲಯ ವ್ಯಾಪ್ತಿಯಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣದ (ಮೆಜೆಸ್ಟಿಕ್) ಬಳಿಯ ಗುಬ್ಬಿ ತೋಟದಪ್ಪ ರಸ್ತೆ, ಧನ್ವಂತರಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ ಹಾಗೂ ಬಸ್ ಘಟಕ ಸಮೀಪದ ಪಾದಚಾರಿ ರಸ್ತೆಯನ್ನು ಮಂಗಳವಾರ ಮುಂಜಾನೆ 6.30ರಿಂದ 8.30ರವರೆಗೆ ಪರಿವೀಕ್ಷಣೆ ನಡೆಸಿದರು.
‘ಬೆಂಗಳೂರಿನಲ್ಲಿ ಪಾದಚಾರಿಗಳಿಗೆ ಮೊದಲ ಸ್ಥಾನ ನೀಡಿ, ಅವರಿಗೆ ಸುಗಮವಾಗಿ ಸಂಚರಿಸುವಂತಹ ಮಾರ್ಗಗಳನ್ನು ನಿರ್ಮಿಸಬೇಕು. ಜೊತೆಗೆ ಪಾದಚಾರಿ ಮಾರ್ಗಗಳನ್ನು ಕಾಲ-ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಂತಲಾ ಸಿಲ್ಕ್ ಜಂಕ್ಷನ್ ಬಳಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಪಾದಚಾರಿ ಮಾರ್ಗವನ್ನು ವಿಸ್ತರಣೆ ಮಾಡಲು ಆದೇಶಿಸಿದರು.
ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಲೂ ಸಾಕಷ್ಟು ಶೌಚಾಲಯಗಳಿದ್ದರೂ, ಬಹುತೇಕ ಕಡೆ ಪಾದಚಾರಿ ಮಾರ್ಗಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡಲಾಗಿದೆ. ಎಲ್ಲ ಪಾದಚಾರಿ ಮಾರ್ಗಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಧನ್ವಂತರಿ ರಸ್ತೆ ಕಡೆ ಹೋಗುವ ಪಾದಚಾರಿ ಮಾರ್ಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ಪಾದಚಾರಿ ಮಾರ್ಗಗಳಲ್ಲಿ ಬಹುತೇಕ ಕಡೆ ಕರ್ಬ್ಸ್ ಹಾಳಾಗಿದ್ದು, ಅವುಗಳನ್ನು ಕೂಡಲೇ ದುರಸ್ತಿಪಡಿಸಬೇಕು. ಒಳಚರಂಡಿಗೆ ಅಳವಡಿಸಿರುವ ಡಕ್ಟ್‌ಗಳ ಮೂಲಕ ಕೊಳಚೆ ನೀರು ಹೊರಬರುತ್ತಿರುವುದನ್ನು ದುರಸ್ತಿ ಮಾಡಬೇಕು ಎಂದು ಸೂಚಿಸಿದರು.
ಬೀದಿಬದಿ ವ್ಯಾಪಾರಕ್ಕೆ ಕಡಿವಾಣ: ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶದ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿಬದಿ ವ್ಯಾಪಾರಿಗಳು ಪಾದಚಾರಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯಾಪಾರ ಮಾಡಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು. ಬೀದಿ ಬದಿ ವ್ಯಾಪಾರ ಮಾಡಲು ಗುರುತಿನ ಚೀಟಿ ನೀಡಿದಂತಹ ವ್ಯಾಪಾರಿಗಳನ್ನು ಬಿಟ್ಟು ಉಳಿದವರಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಒತ್ತುವರಿ ತೆರವು: ಉಪ್ಪಾರಪೇಟೆ ಪೊಲೀಸ್ ಠಾಣೆಯ ಬಳಿಯ ಶೌಚಾಲಯದ ಪಕ್ಕದಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ್ದ ಗೋಡೆ ಭಾಗವನ್ನು ಕಂಡು ಕೂಡಲೇ ತೆರವುಗೊಳಿಸಲು ಮಹೇಶ್ವರ್ ರಾವ್ ಸೂಚಿಸಿದರು. ಅದರಂತೆ ಮಧ್ಯಾಹ್ನದ ವೇಳೆಗೆ ಒತ್ತುವರಿಯನ್ನು ಎಂಜಿನಿಯರ್ ತೆರವುಗೊಳಿಸಿದರು.
ವಾರ್ಡ್ ರಸ್ತೆಗಳ ದುರಸ್ತಿಗೆ ಆದೇಶ
ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್ ಎಂಜಿನಿಯರ್‌ಗಳು ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವ ಎಲ್ಲಾ ರಸ್ತೆಗಳನ್ನು ಪರಿಶೀಲನೆ ಮಾಡಿ ಪಾದಚಾರಿ ಮಾರ್ಗಗಳ ಒತ್ತುವರಿ ಬ್ಲಾಕೇಜ್ ಸ್ಲ್ಯಾಬ್ಸ್ ದುರಸ್ತಿ ಕರ್ಬ್ಸ್ ಹಾಳಾಗಿರುವುದನ್ನು ಪಟ್ಟಿ ಮಾಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ವಲಯ ಜಂಟಿ ಆಯುಕ್ತರೂ ಯಾದೃಚ್ಛಿಕವಾಗಿ(ರ‍್ಯಾಂಡಮ್) ಸ್ಥಳಗಳಿಗೆ ಭೇಟಿ ದುರಸ್ತಿಪಡಿಸಿರುವ ಕುರಿತು ಖಾತರಿಪಡಿಸಿಕೊಳ್ಳಬೇಕು ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.