ಬೆಂಗಳೂರು: ನಗರದಲ್ಲಿ ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ಆರೋಪದಡಿ ವಿದೇಶಿ ಪ್ರಜೆಯನ್ನು ಸಿಸಿಬಿಯ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ನಗರದಲ್ಲಿ ವಾಸವಿದ್ದ ನೈಜೀರಿಯಾದ ಕೆಲ್ವಿನ್ ಇಡಿಕಾ ಒಕೊರೊ (28) ಬಂಧಿತ ಡ್ರಗ್ ಪೆಡ್ಲರ್.
ಹೊರಮಾವು ಸಿಗ್ನಲ್ ಬಳಿಯ ಕಲ್ಲುಮಂಟಪ ಸರ್ವೀಸ್ ರಸ್ತೆಯ ಬಳಿ ಆರೋಪಿ ಕೊಕೇನ್ ಮಾರಾಟ ಮಾಡುತ್ತಿದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ದಾಳಿ ನಡೆಸಿದ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
‘ಆರೋಪಿ ಬಳಿಯಿದ್ದ ₹4 ಲಕ್ಷ ಮೌಲ್ಯದ 54 ಗ್ರಾಂ. ಕೊಕೇನ್, ದ್ವಿಚಕ್ರ ವಾಹನ, ಮೂರು ಮೊಬೈಲ್ ಹಾಗೂ ತೂಕದ ಯಂತ್ರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ. ಇಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಸಕ್ರಿಯನಾಗಿದ್ದ. ನೈಜೀರಿಯಾದ ವ್ಯಕ್ತಿಯೊಬ್ಬನಿಂದ ಮುಂಬೈನಲ್ಲಿ ಕೊಕೇನ್ ಖರೀದಿಸಿ, ಬಳಿಕ ಬೆಂಗಳೂರಿನಲ್ಲಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ’ ಎಂದು ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮಾಹಿತಿ ನೀಡಿದರು.
‘ಆರೋಪಿ ವಿರುದ್ಧ ಸಂಪಿಗೆಹಳ್ಳಿ ಠಾಣೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಹಾಗೂ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.