ADVERTISEMENT

ಜನಪರ ವಿದೇಶಾಂಗ ನೀತಿ: ಜೈಶಂಕರ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:46 IST
Last Updated 10 ಜೂನ್ 2022, 19:46 IST
ಜೈಶಂಕರ್
ಜೈಶಂಕರ್   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಪರಿಣಾಮ ಕಳೆದ 8 ವರ್ಷಗಳಲ್ಲಿ ಜನಪರ ವಿದೇಶಾಂಗ ನೀತಿಯನ್ನು ಭಾರತ ಅಳವಡಿಸಿಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘2014ರ ಬಳಿಕ ಭಾರತದ ವಿದೇಶಾಂಗ ನೀತಿ’ ವಿಷಯದ ಕುರಿತು ಅವರು ಮಾತನಾಡಿದರು.

‘ಬೆಂಗಳೂರು ಉತ್ತಮ ಹೆಸರು ಮತ್ತು ಬ್ರ್ಯಾಂಡಿಂಗ್‌ ಮೂಲಕ ಭಾರತಕ್ಕೆ ಮಹತ್ವದ ಕೊಡುಗೆ ನೀಡಿದೆ. ದೇಶದಲ್ಲಿ ಬೇಗನೆ ಪಾಸ್‌ಪೋರ್ಟ್‌ ಸಿಗುವಂತೆ ಮಾಡಿದ್ದು ಸೇರಿ ಆದ್ಯತೆಗಳು ಕೂಡ ಬದಲಾಗಿವೆ. ಇದು ನಮ್ಮ ಸರ್ಕಾರ ಮಹತ್ವದ ಕೊಡುಗೆ’ ಎಂದು ಹೇಳಿದರು.

ADVERTISEMENT

ಹಿಂದೆ ಪಾಸ್‌ಪೋರ್ಟ್‌ ಪಡೆಯಲು ಹಲವು ತಿಂಗಳ ಕಾಲ ಕಾಯಬೇಕಾಗುತ್ತಿತ್ತು. ಈಗ ತ್ವರಿತಗತಿಯಲ್ಲಿ ಪಾಸ್‌ಪೋರ್ಟ್‌ ಸಿಗುತ್ತದೆ. ಜನರ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡು ಹಿಡಿಯುವ ಪ್ರಧಾನಿ ಇರುವ ಕಾರಣ ಇದೆಲ್ಲ ಸಾಧ್ಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಹೊರ ದೇಶಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ 70 ಲಕ್ಷ ಜನರನ್ನು ಕರೆತರಲಾಯಿತು. ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತರುವುದರಲ್ಲೂ ಪ್ರಧಾನಿಯವರು ಕಳಕಳಿಯ ನೀತಿಯನ್ನು ಅಳವಡಿಸಿಕೊಂಡರು ಎಂದು ವಿವರಿಸಿದರು.

‘ನೇಪಾಳದಲ್ಲಿ ಭೂಕಂಪ, ಯೆಮನ್‌ನಲ್ಲಿ ಯುದ್ಧ, ಮೊಜಾಂಬಿಕ್‌ನಲ್ಲಿ ನೆರೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುವ ಗುಣ ನಮ್ಮ ಸರ್ಕಾರದ್ದಾಗಿತ್ತು, ಯೋಗವನ್ನು ವಿಶ್ವದಾದ್ಯಂತ ಪ್ರಸಾರ ಮಾಡುವಲ್ಲಿ ಮೋದಿಯವರ ಚಿಂತನೆ ಮಹತ್ವದ ಪಾತ್ರವಹಿಸಿದೆ. ಭಾರತದಿಂದ ವಿದೇಶಕ್ಕೆ ಪ್ರವಾಸ ಹೋಗುವ ಮತ್ತು ಹೊರ ದೇಶಗಳಿಂದ ಭಾರತಕ್ಕೆ ಬರಲು ಇದ್ದ ನೀತಿಯನ್ನು ಸರಳಗೊಳಿಸಿದ್ದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.