ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಳಗಾವಿ/ಚಿಕ್ಕಮಗಳೂರು: ಬೆಂಗಳೂರಿನ ಕೆಂಗೇರಿ ಬಳಿಯ ಬಿ.ಎಂ.ಕಾವಲ್‌ನಲ್ಲಿ 532 ಎಕರೆ ಅರಣ್ಯ ಹಾಗೂ ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿದ್ದ ಆರೋಪಿ, ಮರೇಬೈಲ್ ಗ್ರಾಮದ ಎಂ.ಬಿ.ಮನ್ಮಥ(ನೇಮಣ್ಣಗೌಡ) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
‘ಮನ್ಮಥ ಅವರು ಹಿಂದೆಯೂ ಇದೇ ರೀತಿ ಸುಳ್ಳು ಮತ್ತು ನಕಲಿ ದಾಖಲೆ ಸಲ್ಲಿಸಿ, 512 ಎಕರೆ 26 ಗುಂಟೆ ಅರಣ್ಯ, ಸರ್ಕಾರಿ ಭೂಮಿಯ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸಿದ್ದರು. ಈ ಸಂಬಂಧ ಕಳೆದ ನ.28ರಂದು ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೆಳಗಾವಿಯಲ್ಲಿ ಮಂಗಳವಾರ ತಿಳಿಸಿದರು.
ಅರಣ್ಯ ಮತ್ತು ಸರ್ಕಾರಿ ಭೂಮಿ ಕಬಳಿಕೆಯ ಸಂಚಿನಲ್ಲಿ ಯಾರು ಶಾಮೀಲಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಲಿದೆ ಎಂದು ಹೇಳಿದರು.
‘ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿ ಕಬಳಿಸುವವರಿಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕೆಲವು ಅಧಿಕಾರಿಗಳು ಮತ್ತು ಸರ್ಕಾರಿ ವಕೀಲರು ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಸಿಐಡಿ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗುವುದು. ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸಲು ಯತ್ನಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.
ದೂರು ನೀಡಿದ್ದ ತಹಶೀಲ್ದಾರ್: ನಕಲಿ ದಾಖಲೆ ಸೃಷ್ಟಿಸಿ ಅಷ್ಟೂ ಜಾಗವನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದ ಆರೋಪದಲ್ಲಿ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಅವರೂ ಡಿ.13ರಂದು ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ವಿವಿಧ 21 ಸರ್ವೆ ನಂಬರ್‌ನಲ್ಲಿ ಒಟ್ಟು 512 ಎಕರೆ 26 ಗುಂಟೆಯನ್ನು ತಮ್ಮ ಪೂರ್ವಜರಾದ ಈರೇಗೌಡ ಎಂಬುವರು ಸಾಗುವಳಿ ಮಾಡುತ್ತಿದ್ದರು. 1956ರ ಇನಾಂ ರದ್ಧತಿ ಕಾಯ್ದೆ ಪ್ರಕಾರ ಸರ್ಕಾರದ ವಶಕ್ಕೆ ಹೋಗಿದೆ. ಬಳಿಕ ಅವರು ಹಾಸನದ ವಿಶೇಷ ಜಿಲ್ಲಾಧಿಕಾರಿ ಮುಂದೆ ಅಧಿಬೋಗದಾರಿಕೆ ಅರ್ಜಿ ಸಲ್ಲಿಸಿದ್ದರು. 1974ರಲ್ಲಿ ಈರೇಗೌಡರಿಗೆ ಹಕ್ಕು ಮರು ವರ್ಗಾವಣೆಯಾಗಿದೆ ಎಂಬ ದಾಖಲೆಗಳನ್ನು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಅವರ ಮುಂದೆ ನೇಮಣ್ಣಗೌಡ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ, ‘ಗ್ರಾಮ ಲೆಕ್ಕಾಧಿಕಾರಿಯ ನಕಲಿ ಸಹಿ, ನಕಲಿ ನಕ್ಷೆಗಳನ್ನು ತಯಾರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ’ ಎಂದು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ತಹಶೀಲ್ದಾರ್ ಮೂಡಿಗೆರೆ ಠಾಣೆಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.