ADVERTISEMENT

₹ 1.5 ಕೋಟಿ ಮೌಲ್ಯದ ವಿದೇಶಿ ಸಿಗರೇಟ್‌ ವಶ

ಚಿತ್ರ ಸಹಿತ ಎಚ್ಚರಿಕೆ ಸಂದೇಶವಿಲ್ಲದೆ ಅಕ್ರಮ ಸಾಗಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 20:10 IST
Last Updated 11 ಜೂನ್ 2019, 20:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹತ್ತಿ ಬಟ್ಟೆ ಎಂದು ಪೆಟ್ಟಿಗೆಗಳ ಮೇಲೆ ಬರೆದು ರೈಲಿನಲ್ಲಿಅಕ್ರಮವಾಗಿ ಸಾಗಿಸುತ್ತಿದ್ದ ₹1.5 ಕೋಟಿ ಮೌಲ್ಯದ ವಿವಿಧ ಬ್ರ್ಯಾಂಡ್‌ಗಳ ವಿದೇಶಿ ಸಿಗರೇಟ್‌ಗಳನ್ನು ಇಲ್ಲಿನ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿದೇಶಿ ತಯಾರಿಕೆ ಸಿಗರೇಟ್‌ಗಳನ್ನು ರಟ್ಟಿನ ಬಾಕ್ಸ್‌ಗಳಲ್ಲಿ ತುಂಬಿ ‘ಯಶವಂತಪುರ ದುರಂತೊ ಎಕ್ಸ್‌ಪ್ರೆಸ್‌’ ರೈಲಿನಲ್ಲಿ ಹೌರಾದಿಂದ ಬೆಂಗಳೂರಿಗೆ ಸಾಗಣೆ ಮಾಡಲಾಗುತ್ತಿತ್ತು. ಗುಪ್ತಚರ ವಿಭಾಗ ನೀಡಿದ ಸುಳಿವು ಆಧರಿಸಿ ಕಸ್ಟಮ್ಸ್‌ ಅಧಿಕಾರಿಗಳು ಸಿಗರೇಟ್‌ ಪೆಟ್ಟಿಗೆಗಳನ್ನು ಜಪ್ತಿ ಮಾಡಿದ್ದಾರೆ.

ಇದೇ 8ರಂದು ಕಸ್ಟಮ್ಸ್‌ ಅಧಿಕಾರಿಗಳು ಯಶವಂತಪುರ ರೈಲು ನಿಲ್ದಾಣದಲ್ಲಿ ಇಳಿಸಲಾಗಿದ್ದ ಪಾರ್ಸಲ್‌ಗಳನ್ನು ಪರಿಶೀಲಿಸಿದಾಗ 58 ರಟ್ಟಿನ ಡಬ್ಬಗಳಲ್ಲಿದ್ದ 5.86 ಲಕ್ಷ ಸಿಗರೇಟ್‌ಗಳು ಪತ್ತೆಯಾದವು.

ADVERTISEMENT

ಆನಂತರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮೈಸೂರಿಗೆ ಹೊರಟಿದ್ದ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ 15 ಡಬ್ಬಗಳಲ್ಲಿದ್ದ 1.5 ಲಕ್ಷ ಸಿಗರೇಟ್‌ಗಳನ್ನು ವಶಪಡಿಸಿಕೊಂಡರು.

ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿರುವ ಚಿತ್ರ ಸಹಿತ ಎಚ್ಚರಿಕೆ ಸಂದೇಶ ಪ್ಯಾಕ್‌ಗಳ ಮೇಲೆ ಇಲ್ಲದಿರುವುದರಿಂದ ಸಿಗರೇಟ್‌ಗಳ ಮಾರಾಟ ನಿಷೇಧಿಸಲಾಗಿದೆ. ಅಲ್ಲದೆ, ಇದನ್ನು ವಿದೇಶದಿಂದ ಅಕ್ರಮ ಸಾಗಣೆ ಮಾಡಿರುವ ಶಂಕೆಯಿದೆ ಎಂದು ನಗರ ಕಸ್ಟಮ್ಸ್‌ ಕಮಿಷನರ್‌ ಕಚೇರಿಯ ಹೆಚ್ಚುವರಿ ಕಮಿಷನರ್‌ ರಮಣರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದೊಳಕ್ಕೆ ಅಕ್ರಮವಾಗಿ ಸಾಗಿಸುವ ವಸ್ತುಗಳ ಮೇಲೆ ನಿಗಾ ಇಡಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.