ADVERTISEMENT

₹12 ಕೋಟಿ ವೆಚ್ಚದಲ್ಲಿ ನಾಲ್ಕು ಪಥಗಳ ರಸ್ತೆ ಅಭಿವೃದ್ಧಿ ಅಶ್ವತ್ಥನಾರಾಯಣ

ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 17:06 IST
Last Updated 9 ಡಿಸೆಂಬರ್ 2021, 17:06 IST
ಸಿ.ಎನ್.‌ಅಶ್ವತ್ಥನಾರಾಯಣ
ಸಿ.ಎನ್.‌ಅಶ್ವತ್ಥನಾರಾಯಣ   

ಬೆಂಗಳೂರು:‘ಯಶವಂತಪುರ ವೃತ್ತದ ಬಳಿ ಇರುವ ರೈಲ್ವೆ ಸೇತುವೆಯನ್ನು ₹12 ಕೋಟಿ ವೆಚ್ಚದಲ್ಲಿ ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಬಿಎಪಿಯ ರಸ್ತೆ ಮೂಲಸೌಕರ್ಯ, ರಾಜಕಾಲುವೆ ಮತ್ತು ಕೆರೆಗಳ ವಿಭಾಗಗಳಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪರಿಶೀಲನಾ ಸಭೆಯನ್ನು ಗುರುವಾರ ನಡೆಸಿದರು.

‘ಈ ಸೇತುವೆಯ ಮರುನಿರ್ಮಾಣವು ಜನವರಿಯಲ್ಲಿ ಆರಂಭಗೊಂಡು ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಇದರೊಂದಿಗೆ ಮಲ್ಲೇಶ್ವರ ಬಡಾವಣೆಯಲ್ಲಿರುವ ನಿರ್ಮಲಾ ಕಾನ್ವೆಂಟ್ ಬಳಿಯೂ ಒಂದು ರೈಲ್ವೆ ಸೇತುವೆ ನಿರ್ಮಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಮಲ್ಲೇಶ್ವರ 18ನೇ ಅಡ್ಡರಸ್ತೆಯಿಂದ ಮಿಲ್ಕ್ ಕಾಲೊನಿ ಸಂಪರ್ಕಕ್ಕೆ ರೈಲ್ವೆ ಕೆಳಸೇತುವೆ, ಮೈಸೂರು ಲ್ಯಾಂಪ್ಸ್‌ ಕಾರ್ಖಾನೆ ಪಕ್ಕದಿಂದ ಬ್ರಿಗೇಡ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಡುವೆ ವಾಹನಗಳ ಸುಗಮ ಸಂಚಾರಕ್ಕಾಗಿ ರೈಲ್ವೆ ಕೆಳಸೇತುವೆ ಹಾಗೂ ಟೆಂಡರ್‌ಶ್ಯೂರ್‌ ಯೋಜನೆಯಡಿ ಸಂಪಿಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು’ ಎಂದರು.

‘ಭಾರತೀಯ ವಿಜ್ಞಾನ ಮಂದಿರದ ಎದುರು ಮೇಖ್ರಿ ವೃತ್ತದ ಕಡೆಗೆ ಹೋಗುವ ರಸ್ತೆ ಕಿರಿದಾಗಿರುವುರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆ ವಿಸ್ತರಣೆಗೆ ವಿಜ್ಞಾನ ಮಂದಿರದ ಸ್ವಲ್ಪ ಭೂಮಿಯ ಅಗತ್ಯವಿದೆ. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಜವಾಬ್ದಾರಿ ವಹಿಸಲಾಗಿದೆ’ ಎಂದೂ ಹೇಳಿದರು.

ಸಭೆಯಲ್ಲಿ ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತ ದೀಪಕ್,ಬಿಬಿಎಂ‍ಪಿಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.