ADVERTISEMENT

ಬೆಂಗಳೂರು | ಆನ್‌ಲೈನ್‌ನಲ್ಲಿ ಹಾಲು ಖರೀದಿ: ವೃದ್ಧೆಗೆ ₹ 77 ಸಾವಿರ ವಂಚನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 15:11 IST
Last Updated 24 ಮಾರ್ಚ್ 2024, 15:11 IST
ವಂಚನೆ
ವಂಚನೆ   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಆನ್‌ಲೈನ್ ಮೂಲಕ ಖರೀದಿಸಿದ್ದ ಹಾಲು ಕೆಟ್ಟಿದ್ದರಿಂದ, ಅದನ್ನು ಸಂಬಂಧಪಟ್ಟ ಕಂಪನಿಗೆ ಮರಳಿಸಲು ಯತ್ನಿಸಿ ವೃದ್ಧೆಯೊಬ್ಬರು ₹ 77 ಸಾವಿರ ಕಳೆದುಕೊಂಡಿದ್ದಾರೆ.

‘ಇ–ಕಾಮರ್ಸ್ ಜಾಲತಾಣದ ಹೆಸರಿನಲ್ಲಿ ಸೈಬರ್ ವಂಚಕರು, ವೃದ್ಧೆಯ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ. 65 ವರ್ಷದ ವೃದ್ಧೆ ನೀಡಿರುವ ದೂರು ಆಧರಿಸಿ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಮೈಸೂರು ರಸ್ತೆಯ ಕಸ್ತೂರಬಾ ನಗರದ ವೃದ್ಧೆ, ಮನೆಗೆ ಅಗತ್ಯವಿರುವ ದಿನಸಿಗಳನ್ನು ಇ–ಕಾಮರ್ಸ್ ಜಾಲತಾಣದ ಮೂಲಕ ತರಿಸುತ್ತಿದ್ದರು. ಮಾರ್ಚ್ 18ರಂದು ದಿನಸಿ ಜೊತೆಯಲ್ಲಿ ಹಾಲಿನ ಪೊಟ್ಟಣ ತರಿಸಿದ್ದರು. ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಮೂಲಕ ಹಣ ಪಾವತಿ ಮಾಡಿದ್ದರು. ಪೊಟ್ಟಣ ತೆರೆದು ನೋಡಿದಾಗ, ಹಾಲು ಕೆಟ್ಟಿತ್ತು. ದುರ್ವಾಸನೆ ಬರುತ್ತಿತ್ತು.’

‘ಕೆಟ್ಟ ಹಾಲನ್ನು ಮರಳಿಸಿ ಹಣವನ್ನು ವಾಪಸು ಪಡೆಯಲು ವೃದ್ಧೆ ಮುಂದಾಗಿದ್ದರು. ಇ–ಕಾಮರ್ಸ್ ಜಾಲತಾಣದ ಗ್ರಾಹಕರ ಸೇವಾ ಕೇಂದ್ರದ ಸಂಪರ್ಕ ಸಂಖ್ಯೆಯನ್ನು ಗೂಗಲ್‌ನಲ್ಲಿ ಹುಡುಕಿ ಪಡೆದುಕೊಂಡಿದ್ದರು. ಅದೇ ಸಂಖ್ಯೆಗೆ ಕರೆ ಮಾಡಿದ್ದ ಅವರು, ‘ಹಾಲು ಕೆಟ್ಟಿದೆ. ಅದನ್ನು ವಾಪಸು ತೆಗೆದುಕೊಂಡು, ಹಣವನ್ನು ನೀಡಿ’ ಎಂದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಜಾಲತಾಣದ ಪ್ರತಿನಿಧಿಗಳ ಸೋಗಿನಲ್ಲಿ ಮಾತನಾಡಿದ ವಂಚಕರು, ವೃದ್ಧೆಯ ವೈಯಕ್ತಿಕ ಮಾಹಿತಿ ಪಡೆದುಕೊಂಡಿದ್ದರು. ಲಿಂಕ್ ಕಳುಹಿಸಿ ಯುಪಿಐ ನಂಬರ್ ಹಾಗೂ ಪಿನ್‌ ಸಮೇತ ಮಾಹಿತಿ ಭರ್ತಿ ಮಾಡುವಂತೆ ಹೇಳಿದ್ದರು. ಅದನ್ನು ನಂಬಿದ್ದ ವೃದ್ಧೆ, ಮಾಹಿತಿ ತುಂಬಿದ್ದರು. ಇದಾದ ನಂತರ, ವೃದ್ಧೆಯ ಖಾತೆಯಿಂದ ಹಂತ ಹಂತವಾಗಿ ₹ 77 ಸಾವಿರ ಕಡಿತವಾಗಿದೆ’ ಎಂದು ಮೂಲಗಳು ಹೇಳಿವೆ.

‘ಗೂಗಲ್‌ನಲ್ಲಿ ಜಾಲತಾಣದ ಮಾಹಿತಿ ತಿದ್ದುಪಡಿ ಮಾಡಿರುವ ವಂಚಕರು, ತಮ್ಮ ಸಂಖ್ಯೆ ನಮೂದಿಸಿದ್ದಾರೆ. ಅದೇ ಸಂಖ್ಯೆಗೆ ವೃದ್ಧೆ ಕರೆ ಮಾಡಿದಾಗ, ವಂಚನೆ ಆಗಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.