ADVERTISEMENT

ಪೊಲೀಸರ ಸೋಗಿನಲ್ಲಿ ₹ 1 ಲಕ್ಷ ವಂಚನೆ!

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 21:31 IST
Last Updated 2 ನವೆಂಬರ್ 2019, 21:31 IST

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಸಂಬಂಧ ವಿಚಾರಣೆಗೆ ಬಂದಿದ್ದ ವ್ಯಕ್ತಿಯೊಬ್ಬರ ಸಹೋದರನಿಂದ, ಕೇಂದ್ರ ಅಪರಾಧ ದಳ (ಸಿಸಿಬಿ) ಅಧಿಕಾರಿಗಳ ಸೋಗಿನಲ್ಲಿ ₹ 1 ಲಕ್ಷ ಪಡೆದು ವಂಚಿಸಿದ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

ಪುಟ್ಟೇನಹಳ್ಳಿಯ ಖಾಜಾ ಬಂದೆ ನವಾಜ್ (27) ಬಂಧಿತ ವ್ಯಕ್ತಿ. ಬಂಧಿತ ನಿಂದ ₹ 91 ಸಾವಿರ ನಗದು, ಕಾರು ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಕ್ರಿಕೆಟ್ ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿ ರಮೇಶ್ ಎಂಬುವವರನ್ನು ಸಿಸಿಬಿ ಪೊಲೀಸರು ಅ. 22ರಂದು ವಿಚಾ ರಣೆಗೆ ಕರೆಸಿಕೊಂಡಿದ್ದರು. ಅದರಿಂದ ಗಾಬರಿಗೊಂಡ ಅವರ ಸಹೋದರ ಶ್ರೀನಿವಾಸ್ ಕೂಡ ಸಿಸಿಬಿ ಕಚೇರಿ ಬಳಿ ಬಂದಿದ್ದರು.

ADVERTISEMENT

ಈ ಸಂದರ್ಭದಲ್ಲಿ ಅಲ್ಲೇ ಇದ್ದ ಖಾಜಾ ಬಂದೆ ನವಾಜ್, ‘ತಾನು ಸಿಸಿಬಿ ಹಿರಿಯ ಅಧಿಕಾರಿ ಎಂದು ಶ್ರೀನಿವಾಸ್‌ಗೆ ಪರಿಚಯಿಸಿಕೊಂಡು, ‘ನಿಮ್ಮ ಸಹೋದ ರರನ್ನು ಬಿಟ್ಟು ಕಳುಹಿಸುತ್ತೇವೆ. ಅದಕ್ಕೆ ಹಣ ಕೊಡಬೇಕು ಎಂದು ಹೇಳಿ ₹ 1.10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಕೆಲವೇ ಕ್ಷಣಗಳಲ್ಲಿ ಶ್ರೀನಿವಾಸ್ ಹಣ ಹೊಂದಿಸಿ ಆರೋಪಿಗೆ ನೀಡಿದ್ದಾರೆ. ಬಳಿಕ, ‘ನೀವು ಮನೆಗೆ ಹೋಗಿ. ಅಷ್ಟರಲ್ಲಿ ನಿಮ್ಮ ಸಹೋದರ ಕೂಡಾ ಮನೆಗೆ ಬಂದಿರುತ್ತಾರೆ’ ಎಂದು ನಂಬಿಸಿ ಕಳುಹಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ಕೆಲ ಸಮಯದ ನಂತರ ಮನೆಗೆ ಬಂದ ಸಹೋದರ ರಮೇಶ್‌ಗೆ ಸಿಸಿಬಿ ಕಚೇರಿ ಬಳಿ ನಡೆದ ಘಟನೆಯನ್ನು ಶ್ರೀನಿವಾಸ್ ವಿವರಿಸಿದ್ದಾರೆ.

ಆಗ ಆಶ್ಚರ್ಯಗೊಂಡ ರಮೇಶ್, ‘ವಿಚಾರಣೆಯ ಬಳಿಕ ಪೊಲೀಸರು ವಾಪಸು ಕಳುಹಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಬಂಧಿಸಿಯೂ ಇಲ್ಲ’ ಎಂದು ಹೇಳಿದ್ದಾರೆ.

ತಕ್ಷಣ ಸಿಸಿಬಿ ಕಚೇರಿ ಬಳಿ ಬಂದು ನವಾಜ್ ಎಂಬಾತನ ಬಗ್ಗೆ ವಿಚಾರಿಸಿ ದಾಗ, ಆ ಹೆಸರಿನ ವ್ಯಕ್ತಿ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅದರಿಂದ ಆತಂಕಗೊಂಡ ರಮೇಶ್ ಅವರು ಕಾಟನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.