ADVERTISEMENT

ಬಿಬಿಎಂಪಿಯಲ್ಲಿ 'ಗೋಲ್‌ಮಾಲ್': ಯಾರದ್ದೋ ಮನೆ ಮತ್ಯಾರಿಗೋ ಟಿಡಿಆರ್‌ಸಿ!

ಲಂಚಕ್ಕಾಗಿ ಬಿಬಿಎಂಪಿ ಅಧಿಕಾರಿಗಳ ‘ಗೋಲ್‌ಮಾಲ್‌’

ಹೊನಕೆರೆ ನಂಜುಂಡೇಗೌಡ
Published 23 ಮೇ 2020, 19:22 IST
Last Updated 23 ಮೇ 2020, 19:22 IST
   

ಬೆಂಗಳೂರು: ಯಾರದ್ದೋ ಮನೆ, ನಿವೇಶನ; ಮತ್ಯಾರಿಗೋ ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರ (ಟಿಡಿಆರ್‌ಸಿ) ವಿತರಣೆ! ಬಿಬಿಎಂಪಿಯ ಅಧಿಕಾರಿಗಳು ಲಂಚಕ್ಕಾಗಿ ‘ಗೋಲ್‌ಮಾಲ್‌’ ಮಾಡಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆ ಬಯಲಿಗೆಳೆದಿದೆ.

ಕೌದೇನಹಳ್ಳಿಯ ಸರ್ವೆ ನಂಬರ್‌ 132ರ ಜಮೀನನ್ನು ರಸ್ತೆ ವಿಸ್ತರಣೆಗಾಗಿ ಗುರುತಿಸಿದ್ದು, ಈ ಸ್ಥಳದಲ್ಲಿ ರಾಮರತ್ನಮ್ಮ, ಆರ್‌.ಎ.ಎಸ್‌ ಹಮೀದ್‌, ಬಿ. ಭಾರತಿ ಮತ್ತಿತರರ ಮನೆಗಳಿವೆ. ಆದರೆ, ಪಹಣಿಯಲ್ಲಿ ಹೆಸರಿದೆ ಎಂಬ ಕಾರಣಕ್ಕೆ ಜಮೀನಿನ ಮೂಲ ಮಾಲೀಕರಾದ ಮುನಿರಾಜಪ್ಪ ಮತ್ತಿತರರಿಗೆ ಟಿಡಿಆರ್‌ಸಿ ವಿತರಿಸಲಾಗಿದೆ.

ಉದ್ದೇಶಿತ ಹೊರಮಾವು–ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ವಂಚನೆ ಕುರಿತಂತೆ ತನಿಖೆ ನಡೆಸುತ್ತಿರುವ ಎಸಿಬಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಈ ವಿಷಯ ಪ್ರಸ್ತಾಪಿಸಿದೆ.

ADVERTISEMENT

2019ರ ಜುಲೈ 15ರಂದು ಎಸಿಬಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಬರೆದಿರುವ ಪತ್ರದಲ್ಲಿ, ‘ಬಿಬಿಎಂಪಿ ಮಹದೇವಪುರ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ರಾಮೇಗೌಡ (ನಿವೃತ್ತರಾಗಿದ್ದಾರೆ) ಹಾಗೂ ಉಪ ಆಯುಕ್ತ ಉಮಾನಂದ ರೈ (ನಿವೃತ್ತರಾಗಿದ್ದಾರೆ) ಅಕ್ರಮಗಳಲ್ಲಿ ಭಾಗಿಯಾಗಿ, ಅಧಿಕಾರ ದುರುಪಯೋಗ ಮಾಡಿ
ಕೊಂಡಿದ್ದಾರೆ. ಆ ಮೂಲಕ ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ನಷ್ಟಮಾಡಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

ರೇವಣ್ಣ ಮತ್ತು ಮಕ್ಕಳು (ಮುನಿರಾಜಪ್ಪನವರ ತಂದೆ) ಸರ್ವೆ ನಂಬರ್‌ 132ರಲ್ಲಿ ಭೂಪರಿವರ್ತನೆ ಮಾಡದೆಯೇ 6.22 ಎಕರೆ ಜಮೀನನ್ನು ಬಡಾವಣೆಯಾಗಿ ಅಭಿವೃದ್ಧಿಪಡಿಸಿ ಚದರಡಿ ಲೆಕ್ಕದಲ್ಲಿ 2002ರ ಜೂನ್‌ಗೆ ಮುನ್ನ ಮಾರಿದ್ದಾರೆ. ನಿವೇಶನಗಳನ್ನು ಖರೀದಿಸಿದವರು 2002ಕ್ಕೆ ಮೊದಲೇ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕಾಲಕಾಲಕ್ಕೆ ಕಂದಾಯ ಪಾವತಿ ಮಾಡುತ್ತಿದ್ದಾರೆ.

2009ರ ಜುಲೈನಲ್ಲಿ ಸರ್ವೆ ನಂಬರ್‌ 132ರ ಜಮೀನಿನ ಕೆಲ ಭಾಗವನ್ನು ರಸ್ತೆ ವಿಸ್ತರಣೆಗಾಗಿ ಬಳಸಿಕೊಳ್ಳುವ ಸಲುವಾಗಿ ಬಿಬಿಎಂಪಿ ಅಧಿಸೂಚನೆ ಹೊರಡಿಸಿದೆ. ‘ಬಿಬಿಎಂಪಿ ಅಧಿಕಾರಿಗಳು ಈ ಸ್ಥಳ ಪರಿಶೀಲನೆ ಮಾಡಿಲ್ಲ. ಸ್ವತ್ತಿನ ನಿಜವಾದ ಮಾಲೀಕರಿಂದ ಅರ್ಜಿ ಸ್ವೀಕರಿಸದೆ, ಕಾನೂನುಬಾಹಿರವಾಗಿ ಜಮೀನಿನ ಮೂಲ ಮಾಲೀಕರಿಗೆ ಟಿಡಿಆರ್‌ಸಿ ವಿತರಣೆ ಮಾಡಿದ್ದಾರೆ. ಆ ಮೂಲಕ ಪಾಲಿಕೆ ಆಯುಕ್ತರು 2012ರ ಜೂನ್‌ 13ರಂದು ಹೊರಡಿಸಿರುವ ಸುತ್ತೋಲೆ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಎಡಿಜಿಪಿ ಪತ್ರದಲ್ಲಿ ಹೇಳಿದ್ದಾರೆ.

ಇಬ್ಬರೂ ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರಿಸಲು ಒಪ್ಪಿಗೆ ನೀಡುವಂತೆ ಕೇಳಿ 10 ತಿಂಗಳುಗಳೇ ಕಳೆದಿವೆ. ಇದುವರೆಗೆ ಪ್ರಧಾನ ಕಾರ್ಯದರ್ಶಿ ಅನುಮತಿ ನೀಡಿಲ್ಲ. ಟಿಡಿಆರ್‌ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಬರೆದಿರುವ ಇನ್ನೂ ಅನೇಕ ಪತ್ರಗಳು ವಿವಿಧ ಇಲಾಖೆಗಳಲ್ಲಿ ದೂಳು ಹಿಡಿಯುತ್ತಿವೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.