ADVERTISEMENT

ಲಿಂಗತ್ವ ಅಲ್ಪಸಂಖ್ಯಾತರು, ಮಹಿಳೆಯರಿಗೆ ಉಚಿತವಾಗಿ ಆಟೊ ನೀಡಲು ಚಿಂತನೆ: ಹ್ಯಾರಿಸ್‌

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 14:27 IST
Last Updated 13 ಸೆಪ್ಟೆಂಬರ್ 2025, 14:27 IST
<div class="paragraphs"><p>ಆಟೊ ರಿಕ್ಷಾ ಕೌಶಲ ತರಬೇತಿ ಕಾರ್ಯಕ್ರಮಕ್ಕೆ ಎನ್.ಎ. ಹ್ಯಾರಿಸ್ ಚಾಲನೆ ನೀಡಿದರು. ರೇವತಿ ಅಶೋಕ್, ಲಕ್ಷ್ಮಿ ಗಣೇಶ್ ಉಪಸ್ಥಿತರಿದ್ದರು. </p></div>

ಆಟೊ ರಿಕ್ಷಾ ಕೌಶಲ ತರಬೇತಿ ಕಾರ್ಯಕ್ರಮಕ್ಕೆ ಎನ್.ಎ. ಹ್ಯಾರಿಸ್ ಚಾಲನೆ ನೀಡಿದರು. ರೇವತಿ ಅಶೋಕ್, ಲಕ್ಷ್ಮಿ ಗಣೇಶ್ ಉಪಸ್ಥಿತರಿದ್ದರು.

   

ಪ್ರಜಾವಾಣಿ ಚಿತ್ರ 

ಬೆಂಗಳೂರು: ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಟೊ ರಿಕ್ಷಾ ಮಾತ್ರವಲ್ಲ ಕಾರು ಚಲಾಯಿಸುವ ಬಗ್ಗೆಯೂ ತರಬೇತಿ ನೀಡಬೇಕು. ಆನಂತರ ವಾಹನವನ್ನು ಒದಗಿಸಿಕೊಡುವ ಮೂಲಕ ಅವರು ಸ್ವಾವಲಂಬಿಯಾಗಿ ಬದುಕಲು ನೆರವಾಗಬೇಕು. ಈ ಬಗ್ಗೆ ಜಿಬಿಎಯೊಂದಿಗೆ ಚರ್ಚಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ತಿಳಿಸಿದರು.

ADVERTISEMENT

ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಶಾಂತಿನಗರ ಕ್ಷೇತ್ರದ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಉಚಿತ ಆಟೊ ಚಾಲನಾ ತರಬೇತಿ‘ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಚಾಲನಾ ತರಬೇತಿ ಪಡೆದ ಅರ್ಹರಿಗೆ ಸರ್ಕಾರದಿಂದಲೇ ಉಚಿತವಾಗಿ ಆಟೊ ಒದಗಿಸುವುದು ಅವಶ್ಯ ಎಂದು ಹೇಳಿದರು.

ಕಿರ್ಲೋಸ್ಕರ್ ಸಿಸ್ಟಮ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್ ಮಾತನಾಡಿ, ‘ಆಟೊ ಚಲಾಯಿಸುವವರು ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಇದ್ದಾಗ ರಾತ್ರಿ ಪ್ರಯಾಣ ಬೆಳೆಸುವ ಮಹಿಳೆಯರಿಗೆ ಧೈರ್ಯ ಬರುತ್ತದೆ. ಈ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ದೇಶದಲ್ಲಿಯೇ ಬೆಂಗಳೂರು ಮಾದರಿಯಾಗಬೇಕು’ ಎಂದು ಆಶಿಸಿದರು. 

ಸಿಜಿಐ ಉಪಾಧ್ಯಕ್ಷೆ ಲಕ್ಷ್ಮಿ ಗಣೇಶ್ ಮಾತನಾಡಿ, ‘ವೃತ್ತಿ ಜೀವನ ಪ್ರಾರಂಭಿಸಬೇಕೆಂಬ ಅಭಿಲಾಷೆ ಹೊಂದಿರುವ ಮಹಿಳೆಯರಿಗೆ ಇದು ಉತ್ತಮ ಅವಕಾಶ. ಉಚಿತವಾಗಿಯೇ ತರಬೇತಿ ನೀಡಲಾಗುತ್ತಿದೆ’ ಎಂದರು.

ಬಿ.ಪ್ಯಾಕ್‌ ವ್ಯವಸ್ಥಾಪಕ ಟ್ರಸ್ಟಿ ರೇವತಿ ಅಶೋಕ್ ಮಾತನಾಡಿ, ‘ಎರಡನೇ ಹಂತದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಟೊ ಚಾಲನಾ ತರಬೇತಿ ನೀಡಲಿದ್ದೇವೆ. ನಾಯಕತ್ವ, ಇಂಗ್ಲಿಷ್ ಸಂವಹನ, ಗ್ರಾಹಕ ನಿರ್ವಹಣೆ, ಡಿಜಿಟಲ್ ಹಾಗೂ ಆರ್ಥಿಕ ಜ್ಞಾನ ಕೌಶಲಗಳನ್ನು ಸಹ ಕಲಿಸಿಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

ಸಿಜಿಐ ಉಪಾಧ್ಯಕ್ಷೆ ಆರತಿ ಹಿರೇಮಠ, ಇಎಸ್‌ಜಿ ಮತ್ತು ಸಿಎಸ್ಆರ್ ನಿರ್ದೇಶಕ ಸುಧಾಕರ್ ಪೈ, ಬಿ. ಪ್ಯಾಕ್‌ ಸದಸ್ಯೆ ಚಿತ್ರಾ ತಲ್ವಾರ್, ಬಿ.ಕ್ಲಿಪ್‌ನ ಸಂಪತ್, ಕಾವೇರಿ ಕೇದಾರನಾಥ್, ಸರಸ್ವತಿ, ರಾಘವೇಂದ್ರ ಪೂಜಾರಿ ಎಚ್.ಎಸ್., ಭರತ್, ಸಿಜಿಐ ಸದಸ್ಯೆ ರೂಪಾ ಸಿದ್ದರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.