ADVERTISEMENT

ವಯಸ್ಸು ಎಂಬತ್ತು: ಇದೆ ಆನ್‌ಲೈನ್ ಪಾಠ ಮಾಡೋ ಹುಮ್ಮಸು

ಫೋನ್‌ ಕೊಡಿಸಿ, ಪಾಠವನ್ನೂ ಮಾಡುತ್ತಾರೆ l ಬಡ ಮಕ್ಕಳಿಗೆ ಉಚಿತ ಆನ್‌ಲೈನ್‌ ಪಾಠ :ಇಳಿವಯಸ್ಸಿನಲ್ಲಿಯೂ ಸೇವಾ ಕಾರ್ಯ:

ಗುರು ಪಿ.ಎಸ್‌
Published 29 ಸೆಪ್ಟೆಂಬರ್ 2020, 19:45 IST
Last Updated 29 ಸೆಪ್ಟೆಂಬರ್ 2020, 19:45 IST
ಇಂದಿರಾ–ಬದರಿನಾಥ ದಂಪತಿ
ಇಂದಿರಾ–ಬದರಿನಾಥ ದಂಪತಿ   

ಬೆಂಗಳೂರು: ಶಾಲಾ–ಕಾಲೇಜುಗಳಲ್ಲಿ ತರಗತಿಗಳು ಸ್ಥಗಿತಗೊಂಡಿರುವ ಕಾಲದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಆನ್‌ಲೈನ್‌ ಪಾಠ ಮಾಡುತ್ತಿದ್ದಾರೆ ಇಲ್ಲಿನ ರಾಜರಾಜೇಶ್ವರಿನಗರದ ಬದರಿನಾಥ ವಿಠ್ಠಲ್ ಮತ್ತು ಇಂದಿರಾ ವಿಠ್ಠಲ್ ದಂಪತಿ.

ಬದರಿನಾಥ ಅವರಿಗೆ 83 ವರ್ಷ, ಇಂದಿರಾ ಅವರ ವಯಸ್ಸು 78. ಸೇವೆಯಿಂದ ನಿವೃತ್ತಿಗೊಂಡು 20 ವರ್ಷಗಳೇ ಕಳೆದಿದ್ದರೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವರು ಉತ್ಸಾಹದಿಂದ ಪಾಠ ಮಾಡುತ್ತಿದ್ದಾರೆ. ಸದ್ಯ, 3ರಿಂದ 12ನೇ ತರಗತಿಯವರೆಗಿನ 9 ಮಕ್ಕಳಿಗೆ ಎಲ್ಲ ವಿಷಯಗಳನ್ನು ಬೋಧಿಸುತ್ತಿದ್ದಾರೆ.

‘ಮನೆಯಲ್ಲಿ ಅಡುಗೆ ಕೆಲಸ ಮಾಡುವ ಮಹಿಳೆಯ ಇಬ್ಬರು ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದ್ದೆವು. ಈಗ ಕೊರೊನಾ ಇರುವುದರಿಂದ ಹಲವು ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಆನ್‌ಲೈನ್‌ ಮೂಲಕ ಬೇರೆ ಮಕ್ಕಳಿಗೂ ಪಾಠ ಮಾಡಬಹುದಲ್ಲ ಎಂದು ಸ್ನೇಹಿತರೊಬ್ಬರು ಸಲಹೆ ನೀಡಿದರು. ನಮಗೂ ಸರಿ ಎನಿಸಿದ್ದರಿಂದ ಈ ಕಾರ್ಯ ಕೈಗೆತ್ತಿಕೊಂಡಿದ್ದೇವೆ’ ಎಂದು ಬದರಿನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಸಂದರ್ಭದಲ್ಲಿ ಫೋನ್‌ ಖರೀದಿಸಲು ಕೂಡ ಎಷ್ಟೋ ಪೋಷಕರಿಗೆ ಆಗುತ್ತಿಲ್ಲ. ಅಂತಹ ಕುಟುಂಬದ ಮಕ್ಕಳನ್ನು ಗುರುತಿಸಿ ಪಾಠ ಮಾಡುತ್ತಿದ್ದೇವೆ. ಇಂತಹ ಎಷ್ಟೇ ಮಕ್ಕಳು ಬಂದರೂ ಬೋಧಿಸಲು ಸಿದ್ಧರಿದ್ದೇವೆ. ಅವರು ಆರ್ಥಿಕವಾಗಿ ಹಿಂದುಳಿದಿರಬೇಕು. ಸ್ಥಿತಿವಂತರ ಮಕ್ಕಳಿಗೂ ಪಾಠ ಹೇಳುತ್ತೇವೆ. ಆದರೆ, ಅವರು ಇತರೆ ಬಡಮಕ್ಕಳಿಗೆ ಆನ್‌ಲೈನ್‌ ತರಗತಿಗೆ ವ್ಯವಸ್ಥೆ (ಫೋನ್‌, ವೈ–ಫೈಸೌಲಭ್ಯ) ಮಾಡಿಕೊಡಬೇಕು. ಇದರಿಂದ ಹೆಚ್ಚು ವಿದ್ಯಾರ್ಥಿಗಳಿಗೆ ಅನು
ಕೂಲವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

ಬದರಿನಾಥ ಅವರು ಬಾಂಬೆ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಟಾಟಾ ಫಂಡಮೆಂಟಲ್‌ ರಿಸರ್ಚ್‌ ಸಂಸ್ಥೆ (ಟಿಐಎಫ್‌ಆರ್‌)ಯಲ್ಲಿ ಕೆಲಸ ಮಾಡಿದ್ದು, ದೇಶ ಮತ್ತು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಇಂದಿರಾ ಅವರು ಶಿಕ್ಷಕಿಯಾಗಿದ್ದು, ಹಲವು ಶಾಲೆಗಳ ಸ್ಥಾಪಕ ಟ್ರಸ್ಟಿಯಾಗಿದ್ದಾರೆ.

‘ಹೆಚ್ಚು ಓದಿದವರು, ದೊಡ್ಡ ಹುದ್ದೆಯಲ್ಲಿದ್ದವರು ನಿವೃತ್ತರಾಗಿ ಈಗ ಮನೆಯಲ್ಲಿದ್ದಾರೆ. ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಈ ರೀತಿ ಉಚಿತವಾಗಿ ಆನ್‌ಲೈನ್‌ ತರಗತಿ ತೆಗೆದುಕೊಂಡರೆ, ಅನೇಕ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ’ ಎಂದು ಅವರು ಸಲಹೆ ನೀಡುತ್ತಾರೆ.ಬದರೀನಾಥ ಅವರ ಸಂಪರ್ಕಕ್ಕೆ: 99004 08760, 080–41501976.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.