ADVERTISEMENT

ಬಡ ವಿದ್ಯಾರ್ಥಿಗಳಿಗೆ ಸಿಕ್ಕಿತು ಫೋನ್‌– ಪುಸ್ತಕ

ಬದರಿನಾಥ–ಇಂದಿರಾ ದಂಪತಿ ಕಾರ್ಯಕ್ಕೆ ನಾಗರಿಕರ ಸಹಕಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 20:34 IST
Last Updated 18 ಅಕ್ಟೋಬರ್ 2020, 20:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಉಚಿತವಾಗಿ ಪಾಠ ಮಾಡುತ್ತಿರುವ ಬದರಿನಾಥ ವಿಠ್ಠಲ್– ಇಂದಿರಾ ದಂಪತಿಯ ಸೇವಾಕಾರ್ಯಕ್ಕೆ ಹಲವು ನಾಗರಿಕರೂ ಕೈಜೋಡಿಸಿದ್ದಾರೆ. ಮೊದಲು 9 ಮಕ್ಕಳಿಗೆ ಪಾಠ ಮಾಡುತ್ತಿದ್ದ ಈ ದಂಪತಿ, ಈಗ 90 ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ.

‘ಆನ್‌ಲೈನ್‌ ಮೂಲಕ ಪಾಠ ಕೇಳಲು ಅನೇಕ ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಲವು ನಾಗರಿಕರು ಮಕ್ಕಳಿಗೆ ಮೊಬೈಲ್‌ ಫೋನ್‌ ಕೊಡಿಸುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಾರೆ’ ಎಂದು ಬದರಿನಾಥ ಹೇಳಿದರು.

‘ದೊಡ್ಡಬಳ್ಳಾಪುರ ತಾಲ್ಲೂಕಿನ ಮಾರಸಂದ್ರದ ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿನಿಗೆ ಐಟಿ ಕಂಪನಿಯ ನಿವೃತ್ತ ಉದ್ಯೋಗಿಯೊಬ್ಬರು ಸ್ಮಾರ್ಟ್‌ಫೋನ್‌ ಕೊಡಿಸಿದ್ದಾರೆ. ಈ ವಿದ್ಯಾರ್ಥಿನಿಯ ತಂದೆ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಬದರಿನಾಥ ಹೇಳಿದರು.

ADVERTISEMENT

‘ವಯಸ್ಸು ಎಂಬತ್ತು: ಇದೆ ಆನ್‌ಲೈನ್‌ ಪಾಠ ಮಾಡೋ ಹುಮ್ಮಸ್ಸು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಈ ದಂಪತಿ ಬಗ್ಗೆ ವರದಿ ಪ್ರಕಟವಾದ ನಂತರ ಹಲವು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಅವರು ತಿಳಿಸಿದರು.

‘ಆರನೆ ತರಗತಿಯಲ್ಲಿ ಓದುತ್ತಿರುವ ಗಾರ್ಮೆಂಟ್‌ ಕಾರ್ಖಾನೆಯ ಕಾರ್ಮಿಕರೊಬ್ಬರ ಮಗಳಿಗೆ ನಿವೃತ್ತ ಶಿಕ್ಷಕಿಯೊಬ್ಬರು ಸ್ಮಾರ್ಟ್‌ ಫೋನ್‌ ಕೊಡಿಸಿದ್ದಾರೆ. ಹಿರಿಯ ನಾಗರಿಕರು, ಖಾಸಗಿ ಕಂಪನಿಯ ಉದ್ಯೋಗಿಗಳು ಸೇರಿದಂತೆ ಹಲವರು ವಿದ್ಯಾರ್ಥಿಗಳಿಗೆ ಫೋನ್‌ ಕೊಡಿಸಿದ್ದಾರೆ. ಖಾಸಗಿ ವಿಶ್ವವಿದ್ಯಾಲಯದ ಸಿಇಒ ಒಬ್ಬರು, 8ರಿಂದ 10ನೇ ತರಗತಿಯ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳನ್ನು ನೀಡಿದ್ದಾರೆ’ ಎಂದು ಅವರು ತಿಳಿಸಿದರು.

‘ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ಪ್ರಾಧ್ಯಾಪಕರೊಬ್ಬರು, ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಬೋಧಿಸಲು ಮುಂದೆ ಬಂದಿದ್ದಾರೆ’ ಎಂದರು.

‘ಮಾರಸಂದ್ರದ ಶಾಲೆಯಲ್ಲಿ ಓದುತ್ತಿರುವ ಎಲ್ಲ 66 ವಿದ್ಯಾರ್ಥಿಗಳು ಬಡ ಕುಟುಂಬದವರು. ಅದರಲ್ಲಿ, 20 ಜನರ ಬಳಿ ಮಾತ್ರ ಮೊಬೈಲ್‌ ಫೋನ್‌ ಇದ್ದು, ಅವರು ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿದ್ದಾರೆ. ಸ್ಥಿತಿವಂತರು ಈ ಮಕ್ಕಳಿಗೆ ಫೋನ್‌ ಕೊಡಿಸುವ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಅವರು ಹೇಳಿದರು.

‘ಕಾರ್ಪೊರೇಟ್‌ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಇಂಥ ಮಕ್ಕಳಿಗೆ ಮೊಬೈಲ್‌ ಫೋನ್‌ ನೀಡುವ ಕೆಲಸಕ್ಕೆ ಮುಂದಾಗಬೇಕು. ಸೇವಾ ನಿವೃತ್ತಿ ಹೊಂದಿದವರು ಮಕ್ಕಳಿಗೆ ಉಚಿತವಾಗಿ ಪಾಠ ಬೋಧಿಸಲು ಮುಂದೆ ಬಂದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಬದರಿನಾಥ ಅವರ ಸಂಪರ್ಕಕ್ಕೆ– 99004 08760, 080–41501976.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.