ADVERTISEMENT

ಖರೀದಿಗೆ ಆಸಕ್ತಿ ತೋರದ ಜನ: ಹಣ್ಣು, ತರಕಾರಿ ಬೇಡಿಕೆ ಕುಸಿತ

ಮಾರಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆವಕ

​ಪ್ರಜಾವಾಣಿ ವಾರ್ತೆ
Published 9 ಮೇ 2020, 5:40 IST
Last Updated 9 ಮೇ 2020, 5:40 IST
ನಗರದ ಹಲಸೂರಿನ ಕೇಂಬ್ರಿಜ್‌ ರಸ್ತೆಯಲ್ಲಿ ಹಣ್ಣುಗಳನ್ನು ಮಾರುತ್ತಿರುವ ವ್ಯಾಪಾರಿಗಳು --– ಪ್ರಜಾವಾಣಿ ಚಿತ್ರ
ನಗರದ ಹಲಸೂರಿನ ಕೇಂಬ್ರಿಜ್‌ ರಸ್ತೆಯಲ್ಲಿ ಹಣ್ಣುಗಳನ್ನು ಮಾರುತ್ತಿರುವ ವ್ಯಾಪಾರಿಗಳು --– ಪ್ರಜಾವಾಣಿ ಚಿತ್ರ   

ಬೆಂಗಳೂರು: ರಂಜಾನ್ ಉಪವಾಸ ನಡೆಯುತ್ತಿದ್ದರೂ ಹಣ್ಣಿನ ದರಗಳು ಯಥಾಸ್ಥಿತಿಯಲ್ಲಿವೆ. ಹದಿನೈದು ದಿನಗಳಿಂದ ತರಕಾರಿಗಳ ಬೆಲೆ ನೆಲಕಚ್ಚಿವೆ. ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು-ತರಕಾರಿ ಆವಕವಾಗಿದ್ದರೂ ಬೇಡಿಕೆ ಕುಸಿದಿದೆ.

ಲಾಕ್‍ಡೌನ್‍ನಿಂದ ಗ್ರಾಹಕರು ಮೊದಲಿನಂತೆ ಖರೀದಿಗೆ ಒಲವು ತೋರುತ್ತಿಲ್ಲ. ಇದನ್ನು ಮನಗಂಡ ಬಹುತೇಕ ವ್ಯಾಪಾರಿಗಳು ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ, ಹಣ್ಣು, ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಆದರೆ, ಶುಭ ಸಮಾರಂಭಗಳು ಹಾಗೂ ಕಾರ್ಯಕ್ರಮಗಳಿಗೆ ನಿರ್ಬಂಧ ಇರುವ ಕಾರಣ ತರಕಾರಿ ದರಗಳು ನೆಲಕಚ್ಚಿವೆ.

ರಂಜಾನ್ ಉಪವಾಸದ ನಿಮಿತ್ತ ಹಣ್ಣುಗಳು ದುಬಾರಿಯಾಗುತ್ತವೆ. ತಿಂಗಳಿಡೀ ನಡೆಯುವ ಆಚರಣೆ ವೇಳೆ ಆಹಾರಕ್ಕಿಂತ ಹಣ್ಣಿನ ಸೇವನೆ ಹೆಚ್ಚು. ಆದರೆ, ಈ ಬಾರಿಯ ರಂಜಾನ್ ಆಚರಣೆ ಸರಳವಾಗಿ ನಡೆಯುತ್ತಿದ್ದು, ಹಣ್ಣಿನ ದರಗಳು ಎಂದಿನಂತಿವೆ. ಲಾಕ್‍ಡೌನ್‍ನಿಂದ ವಿದೇಶಗಳಿಂದ ಹಣ್ಣುಗಳು ಬರುತ್ತಿಲ್ಲ. ಇಲ್ಲಿಂದ ರಫ್ತು ಮಾಡಲೂ ಸಮಸ್ಯೆಯಾಗಿದೆ.

ADVERTISEMENT

ಸಗಟು ಧಾರಣೆ ಕುಸಿತ: ದಾಸನಪುರ ಎಪಿಎಂಸಿ ಹಾಗೂ ಸಿಂಗೇನ ಅಗ್ರಹಾರಗಳಲ್ಲಿ ಒಂದು ವಾರದಿಂದಲೂ ತರಕಾರಿ ಸಗಟು ದರ ಪಾತಾಳಕ್ಕೆ ಇಳಿದಿವೆ. ಟೊಮೆಟೊ, ಕ್ಯಾಪ್ಸಿಕಂ, ಈರುಳ್ಳಿ, ಸೌತೇಕಾಯಿ, ಎಲೆಕೋಸು, ಕ್ಯಾರೆಟ್, ಆಲೂಗಡ್ಡೆ, ಬದನೆ, ಹೂಕೋಸಿನ ಸಗಟು ದರಗಳು ಪ್ರತಿ ಕೆ.ಜಿ.ಗೆ ₹ 20ಕ್ಕಿಂತ ಕಡಿಮೆ ಇವೆ. ಬೀನ್ಸ್, ಬೆಳ್ಳುಳ್ಳಿ ಹಾಗೂ ಬಟಾಣಿ ದುಬಾರಿಯಾಗಿದೆ.

'ಬೇಸಿಗೆಯಲ್ಲಿ ಲಾಭ ಕೈಸೇರುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಬೆಳೆದಿದ್ದಾರೆ. ಲಾಕ್‍ಡೌನ್‍ನಿಂದ ಎಲ್ಲ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಹಾಗೂ ಬೇಡಿಕೆ ಸಿಗದೇ ಇರುವುದರಿಂದ ದರಗಳು ಇಳಿದಿವೆ. ಉತ್ತಮ ಗುಣಮಟ್ಟದ ತರಕಾರಿಗಳು ಮಾರುಕಟ್ಟೆಗೆ ಬಂದರೂ ಕೊಳ್ಳುವವರು ಬೆರಳೆಣಿಕೆಯಷ್ಟು‘ ಎಂದು ದಾಸನಪುರ ಎಪಿಎಂಸಿ ಮಾರುಕಟ್ಟೆಯ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಎಂ.ಗೋವಿಂದಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.