ಈಜಿಪುರ ಮೇಲ್ಸೇತುವೆ ಕಾಮಗಾರಿ
ಪ್ರಜಾವಾಣಿ ಚಿತ್ರ/ ವಿ. ಪುಷ್ಕರ್
ಬೆಂಗಳೂರು: ಏಳು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇರುವ ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ನಿರ್ವಹಿಸಲು, ಪ್ರತ್ಯೇಕ ಎಂಜಿನಿಯರ್ ತಂಡವನ್ನು ಬಿಬಿಎಂಪಿ ಮುಖ್ಯ ಆಯುಕ್ತರು ನಿಯೋಜಿಸಿದ್ದಾರೆ.
ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಬಿಬಿಎಂಪಿಯ ಯೋಜನೆ–ಕೇಂದ್ರ ವಿಭಾಗದಿಂದ ನಿರ್ವಹಿಸಲಾಗುತ್ತಿತ್ತು. ಆದರೆ, ಯೋಜನೆಗೆ ಎಂಜಿನಿಯರ್‌ಗಳು ಸಹಕಾರ ನೀಡುತ್ತಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿಯವರೂ ಹೇಳಿದ್ದರು. ಹೀಗಾಗಿ, ಕಾಮಗಾರಿ ಅನುಷ್ಠಾನಕ್ಕೆ ಪೂರ್ಣ ಪ್ರಮಾಣದ ತಂಡವನ್ನು ರಚಿಸಲಾಗಿದೆ.
ಬಿಬಿಎಂಪಿಯ ಗುಣ ನಿಯಂತ್ರಣ/ ಗುಣ ಭರವಸೆ ವಿಭಾಗದ ವತಿಯಿಂದ ಇನ್ನು ಮುಂದೆ ‘ಈಜಿಪುರ ಮೇಲ್ಸೇತುವೆ ಯೋಜನೆ’ ಕಾಮಗಾರಿಯನ್ನು ನಿರ್ವಹಿಸುವಂತೆ ಆದೇಶಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಳ್ಳುವವರೆಗೂ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಜಿ. ರಾಘವೇಂದ್ರ ಪ್ರಸಾದ್ ಅವರ ಅಧೀನದಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ.
ಯೋಜನೆ–ಕೇಂದ್ರ–1 ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎನ್. ಚಂದ್ರಶೇಖರ್, ಟಿವಿಸಿಸಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಯೋಜನೆ–ಕೇಂದ್ರ–9ರ ಸಹಾಯಕ ಎಂಜಿನಿಯರ್ ಜೆ.ಎಲ್. ರಂಜಿತ್ ಅವರು, ’ಈಜಿಪುರ ಮೇಲ್ಸೇತುವೆ ಯೋಜನೆ’ ಕಾಮಗಾರಿ ಪೂರ್ಣಗೊಳ್ಳುವವರೆಗೂ ರಾಘವೇಂದ್ರ ಪ್ರಸಾದ್ ಅವರ ಅಧೀನದಲ್ಲಿ ಕಾರ್ಯನಿರ್ವಹಿಸಬೇಕು. ಈ ತಂಡ ತ್ವರಿತವಾಗಿ ಈಜಿಪುರ ಮೇಲ್ಸೇತುವೆ ಅನುಷ್ಠಾನಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.