ADVERTISEMENT

ಡಿಜಿಟಲ್‌ ಆರ್ಥಿಕತೆ: 2026ಕ್ಕೆ ಜಿಡಿಪಿಗೆ ಶೇ 20ರಷ್ಟು ಕೊಡುಗೆ- ರಾಜೀವ್‌

ಮೂರು ದಿನಗಳ ಜಿ–20 ಡಿಜಿಟಲ್‌ ಅಲಯನ್ಸ್‌ ಶೃಂಗಸಭೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 0:30 IST
Last Updated 18 ಆಗಸ್ಟ್ 2023, 0:30 IST
ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಡಿಐಎ ಶೃಂಗಸಭೆಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮಾತನಾಡಿದರು. – ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಡಿಐಎ ಶೃಂಗಸಭೆಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮಾತನಾಡಿದರು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಡಿಜಿಟಲ್‌ ಆರ್ಥಿಕತೆ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದು, 2026ರ ವೇಳೆಗೆ ದೇಶದ ಒಟ್ಟು ಆಂತರಿಕ ಉತ್ಪಾದನೆಗೆ (ಜಿಡಿಪಿ) ಶೇ 20ಕ್ಕೂ ಹೆಚ್ಚು ಕೊಡುಗೆ ನೀಡಲಿದೆ' ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ನಗರದಲ್ಲಿ ಗುರುವಾರ ಆರಂಭವಾದ ಮೂರು ದಿನಗಳ ‘ಜಿ20– ಡಿಜಿಟಲ್‌ ಇನ್ನೋವೇಷನ್‌ ಅಲಯನ್ಸ್‌’(ಡಿಐಎ) ಶೃಂಗಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಡಿಜಿಟಲ್‌ ತಂತ್ರಜ್ಞಾನ ಕ್ರಾಂತಿಗಾಗಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಒಟ್ಟು ಜಿಡಿಪಿಗೆ 2014ರಲ್ಲಿ ಶೇ 4.5ರಷ್ಟು ಕೊಡುಗೆ ನೀಡುತ್ತಿದ್ದ ಡಿಜಿಟಲ್‌ ಆರ್ಥಿಕತೆ ಈಗ ಶೇ 11ರಷ್ಟಾಗಿದೆ’ ಎಂದು ವಿವರಿಸಿದರು.

‘ನಾಗರಿಕರ ಬದುಕಿನಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಡಿಜಿಟಲ್‌ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಕಪ್ಪು ಹಣದ ವಿರುದ್ಧವೂ ಹೋರಾಟ ನಡೆಸಲು ಸಾಧ್ಯವಾಗಿದೆ. ಡಿಜಿಟಲೀಕರಣ ವ್ಯವಸ್ಥೆಯಿಂದ ಆಡಳಿತದಲ್ಲೂ ಸುಧಾರಣೆಗಳಾಗಿವೆ. ಈಗ ಪ್ರತಿಯೊಬ್ಬರು ಡಿಜಿಟಲ್‌ ಉತ್ಪನ್ನಗಳನ್ನು ಬಳಸುತ್ತಿದ್ದಾರೆ’ ಎಂದರು.

ADVERTISEMENT

‘ಡಿಜಿಟಲ್‌ ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದಂತೆ ಎಂಟು ದೇಶಗಳ ಜತೆ ಭಾರತ ಒಪ್ಪಂದ ಮಾಡಿಕೊಂಡಿದೆ’ ಎಂದು  ತಿಳಿಸಿದರು.

ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಲ್ಕೇಶ್‌ ಕುಮಾರ್‌ ಶರ್ಮಾ ಮಾತನಾಡಿ, ‘ಒಂದು ಲಕ್ಷಕ್ಕೂ ಹೆಚ್ಚು ನವೋದ್ಯಮಗಳು ಭಾರತದಲ್ಲಿವೆ. ಸುಮಾರು 107 ಯೂನಿಕಾರ್ನ್‌ಗಳು ಇದರಲ್ಲಿವೆ. ಡಿಜಿಟಲ್‌ ಕ್ರಾಂತಿಯ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯುವಂತಾಗಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಿದ್ದು, ಅದರಲ್ಲಿ ತಕ್ಕಮಟ್ಟಿನ ಯಶಸ್ಸು ಸಾಧಿಸಲಾಗಿದೆ’ ಎಂದು ತಿಳಿಸಿದರು.

29 ದೇಶಗಳ ಪ್ರತಿನಿಧಿಗಳು ಮತ್ತು ಹಲವು ನವೋದ್ಯಮಗಳ ಮುಖ್ಯಸ್ಥರು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.