ADVERTISEMENT

ಗಾಂಧಿ ಬಜಾರ್ | ಬಾಡಿದ ಹೂ, ಕೊಳೆಯುತ್ತಿರುವ ತರಕಾರಿ, ಕಂಗಾಲಾದ ವ್ಯಾಪಾರಿಗಳು

ಕುಂಟುತ್ತಾ ಸಾಗುತ್ತಿದೆ ರಸ್ತೆ ಕಾಮಗಾರಿ

ವರುಣ ಹೆಗಡೆ
Published 11 ಮಾರ್ಚ್ 2023, 20:07 IST
Last Updated 11 ಮಾರ್ಚ್ 2023, 20:07 IST
ಗಾಂಧಿ ಬಜಾರ್‌ನಲ್ಲಿ ನಡೆಯುತ್ತಿರುವ ವೈಟ್‌ ಟಾಪಿಂಗ್ ಕಾಮಗಾರಿ
ಗಾಂಧಿ ಬಜಾರ್‌ನಲ್ಲಿ ನಡೆಯುತ್ತಿರುವ ವೈಟ್‌ ಟಾಪಿಂಗ್ ಕಾಮಗಾರಿ   

ಬೆಂಗಳೂರು: ಎತ್ತ ಕಣ್ಣು ಹಾಯಿಸಿದರೂ ಅಗೆದು ಬಿಟ್ಟ ರಸ್ತೆ, ಯಂತ್ರಗಳ ಕರ್ಕಶ ಶಬ್ದ, ಮುಖಕ್ಕೆ ರಾಚುವ ದೂಳು, ಬಾಡಿದ ಹೂ–ಹಣ್ಣುಗಳು, ಕೊಳೆಯುತ್ತಿರುವ ತರಕಾರಿ, ವ್ಯಾಪಾರವಿಲ್ಲದೆ ಸೊರಗಿದ ಮುಖಗಳು...

ಇದು ನಗರದ ಹೃದಯ ಭಾಗದಲ್ಲಿರುವ ಗಾಂಧಿ ಬಜಾರ್‌ನ ಚಿತ್ರಣ. ಇಲ್ಲಿನ 900 ಮೀ. ಉದ್ದದ ರಸ್ತೆಯ ನವೀಕರಣ ಕಾಮಗಾರಿಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ಕೈಗೆತ್ತಿಕೊಂಡಿದೆ. ಟ್ಯಾಗೋರ್ ಪಾರ್ಕ್ ವೃತ್ತದಿಂದ ರಾಮಕೃಷ್ಣ ಆಶ್ರಮದವರೆಗೆ ಸದ್ಯ ವೈಟ್‌ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ವೈಟ್‌ ಟಾಪಿಂಗ್, ಒಳಚರಂಡಿ ಹಾಗೂ ಪಾದಚಾರಿ ಮಾರ್ಗ ಸೇರಿ ವಿವಿಧ ಕಾಮಗಾರಿಗಳು ಇಲ್ಲಿ ನಡೆಯುತ್ತಿರುವುದಿಂದ ಇಡೀ ಗಾಂಧಿ ಬಜಾರ್ ಅವ್ಯವಸ್ಥೆಯ ಆಗರವಾಗಿದೆ.

ಪೂಜಾ ಸಾಮಗ್ರಿಗಳು, ಹೂವು, ಹಣ್ಣು, ತರಕಾರಿ, ತಿಂಡಿ ತಿನಿಸು, ಬಟ್ಟೆ, ಆಲಂಕಾರಿಕ ವಸ್ತು ಸೇರಿ ಸಕಲವೂ ಇಲ್ಲಿ ಲಭ್ಯ. ಹೀಗಾಗಿಯೇ ಇಲ್ಲಿ ಸದಾ ಜನದಟ್ಟಣೆ ಇರುತ್ತಿತ್ತು. ಆದರೆ, ಕಳೆದ ಐದು ತಿಂಗಳಿನಿಂದ ರಸ್ತೆ ಕಾಮಗಾರಿಯಿಂದಾಗಿ ಇಲ್ಲಿಗೆ ಬರುವ ರಸ್ತೆಗಳ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಇದರಿಂದಾಗಿ ಗ್ರಾಹಕರಿಲ್ಲದೆ ಇಡೀ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಪರಿಣಾಮ ವ್ಯಾಪಾರ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದ್ದು, ಬೀದಿ ಬದಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಕೆಲವರು ತಾತ್ಕಾಲಿಕವಾಗಿ ವ್ಯಾಪಾರ ಸ್ಥಗಿತಗೊಳಿಸಿದ್ದಾರೆ. ಇನ್ನು ಕೆಲವರು ಮುಂಜಾನೆ ಅವಧಿಯಲ್ಲಿ ಮಾತ್ರ ವ್ಯಾಪಾರ ಮಾಡುತ್ತಿದ್ದಾರೆ.

ADVERTISEMENT

ಕಂಗಾಲಾದ ಮಾಲೀಕರು: ಇಲ್ಲಿನ ಬೀದಿ ಬದಿ ವ್ಯಾಪಾರಿಗಳಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ವೃದ್ಧರು. ನಿರಂತರ ದೂಳು, ಜೆಸಿಬಿ ಸೇರಿ ವಿವಿಧ ಯಂತ್ರಗಳ ಸದ್ದು ಇವರಿಗೆ ಸಮಸ್ಯೆಯನ್ನುಂಟು ಮಾಡುತ್ತಿದೆ. ಇದರಿಂದ ಕೆಲ ವೃದ್ಧರು ಸಹ ವ್ಯಾಪಾರದಿಂದ ವಿಮುಖರಾಗುತ್ತಿದ್ದಾರೆ. ಕಾಮಗಾರಿಗೂ ಮೊದಲು ಪ್ರತಿನಿತ್ಯ ಸರಾಸರಿ ₹ 8 ಸಾವಿರದಿಂದ ₹10 ಸಾವಿರ ವ್ಯಾಪಾರ ವಹಿವಾಟು ಮಾಡುತ್ತಿದ್ದವರು, ಈಗ ₹ 3 ಸಾವಿರದಿಂದ ₹ 4 ಸಾವಿರಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ರಸ್ತೆಯ ಇಕ್ಕೆಲಗಳಲ್ಲಿರುವ ಮಳಿಗೆಗಳೂ ವ್ಯಾಪಾರ ವಹಿವಾಟು ಇಲ್ಲದೆ ನಲುಗಿ ಹೋಗಿವೆ. ಕೆಲ ಮಳಿಗೆಗಳ ಮಾಲೀಕರು ಬಾಡಿಗೆ ಕಟ್ಟಲಾಗದೆ ಕಂಗಾಲಾಗಿದ್ದಾರೆ.

ಇಲ್ಲಿ ವಿದ್ಯಾರ್ಥಿ ಭವನ, ರೋಟಿ ಘರ್, ಎಸ್‌ಎಲ್‌ವಿ, ಎ2ಬಿ ಸೇರಿ ಪ್ರಮುಖ ಹೋಟೆಲ್‌ಗಳಿವೆ. ವಾರಾಂತ್ಯದಲ್ಲಿ ಗ್ರಾಹಕರಿಂದ ಗಿಜಿಗಿಡುತ್ತಿದ್ದ ಇಲ್ಲಿನ ಹೋಟೆಲ್‌ಗಳಲ್ಲಿ, ತಿನಿಸುಗಳನ್ನು ಪಡೆಯಲು ಸರದಿಯಲ್ಲಿ ಕಾಯಬೇಕಾಗಿತ್ತು. ಆದರೆ, ಈಗ ಗ್ರಾಹಕರಿಗಾಗಿ ಹೋಟೆಲ್ ಮುಖ್ಯಸ್ಥರು ಎದುರು ನೋಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಾಂಧಿ ಜಜಾರ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಬಹುತೇಕ ಅಡ್ಡ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇದರಿಂದಾಗಿ ಸುತ್ತಮುತ್ತಲೂ ವಾಹನ ಪಾರ್ಕಿಂಗ್ ಕೂಡ ಸಮಸ್ಯೆಯಾಗಿದೆ. ಹೀಗಾಗಿ, ಹೂವು, ಹಣ್ಣು, ಪೂಜಾ ಸಾಮಗ್ರಿ ಸೇರಿ ವಿವಿಧ ವಸ್ತುಗಳ ಖರೀದಿಗೆ ಇಲ್ಲಿಗೆ ಬರುವವರ ಸಂಖ್ಯೆ ಗಣನೀಯ ಇಳಿಕೆಯಾಗುತ್ತಿದೆ.

‘ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುವುದು ಯೋಜನೆಯಲ್ಲಿದೆ. ಈಗಾಗಲೇ ಇಲ್ಲಿ ಮರಗಳು ಇರುವುದರಿಂದ ಗಿಡಗಳನ್ನು ಹೊಸದಾಗಿ ನೆಡುವ ಅಗತ್ಯ ಇಲ್ಲ. ಆ ಜಾಗದಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಪಟ್ಟಣ ವ್ಯಾಪಾರ ಸಮಿತಿ ಸದಸ್ಯೆ ವನಜಾ ಆಗ್ರಹಿಸಿದರು.

ವೈಟ್ ಟಾಪಿಂಗ್ ಕಾರಣದಿಂದಾಗಿ ಗಾಂಧಿಬಜಾರ್ ರಸ್ತೆಯಲ್ಲಿ ವ್ಯಾಪಾರ ಕುಸಿದಿದೆ

‘ಸವಾಲಾದ ಜೀವನ ನಿರ್ವಹಣೆ’
‘ಸಾಲ ಮಾಡಿ ಹೂವನ್ನು ಖರೀದಿಸಿ, ಮಾರಾಟಕ್ಕೆ ತರುತ್ತೇವೆ. ಆದರೆ, ಈಗ 3 ಕೆ.ಜಿ.ಯಿಂದ 4 ಕೆ.ಜಿ. ಹೂವು ಪ್ರತಿನಿತ್ಯ ವ್ಯಾಪಾರ ಆಗದೆ ಹಾಗೇ ಉಳಿಯುತ್ತಿದೆ. ಅದನ್ನು ದೇವಸ್ಥಾನಗಳಿಗೆ ನೀಡಲಾಗುತ್ತಿದೆ. ದಿನದ ದುಡಿಮೆಯನ್ನು ನಂಬಿಕೊಂಡಿದ್ದ ನಮಗೆ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ವ್ಯಾಪಾರಿ ಮಮತಾ ಹೇಳಿದರು.

‘ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಜನ ಬರುತ್ತಿಲ್ಲ. ಮನೆಯಲ್ಲಿ ಕುಳಿತರೆ ಜೀವನ ನಡೆಯುವುದಿಲ್ಲ ಎಂಬ ಕಾರಣಕ್ಕೆ ಮಾರುಕಟ್ಟೆಗೆ ಬರುತ್ತಿದ್ದೇವೆ’ ಎಂದು ವೀಳ್ಯದೆಲೆ ವ್ಯಾಪಾರಿ ಚಂದ್ರಿ ಬೇಸರ ವ್ಯಕ್ತಪಡಿಸಿದರು.

‘ವ್ಯಾಪಾರ ಅರ್ಧದಷ್ಟು ಇಳಿಕೆಯಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಗ್ರಾಹಕರು ಬರುತ್ತಿಲ್ಲ. ಬಂದವರೂ ಪಾರ್ಕಿಂಗ್‌ಗೆ ಸ್ಥಳಾವಕಾಶ ಸಿಗದೆ ಬೇರೆಡೆಗೆ ತೆರಳುತ್ತಿದ್ದಾರೆ’ ಎಂದು ರೋಟಿ ಘರ್ ಹೋಟೆಲ್‌ನ ವ್ಯವಸ್ಥಾಪಕ ಅಶೋಕ್ ಹೇಳಿದರು.

ಒಂದೂವರೆ ತಿಂಗಳಲ್ಲಿ ಪೂರ್ಣ: ಉದಯ್ ಗರುಡಾಚಾರ್
‘ಟ್ಯಾಗೋರ್ ಪಾರ್ಕ್ ವೃತ್ತದಿಂದ ರಾಮಕೃಷ್ಣ ಆಶ್ರಮದವರೆಗೆ ವೈಟ್‌ ಟಾಪಿಂಗ್ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಇನ್ನು ಒಂದರಿಂದ ಒಂದೂವರೆ ತಿಂಗಳಲ್ಲಿ ಕಾಮಗಾರಿ ಪೂರ್ಣ ಆಗಲಿದೆ. ಈ ಯೋಜನೆಯಿಂದ ಅಲ್ಲಿನ ಎಲ್ಲ ವ್ಯಾಪಾರಿಗಳಿಗೆ ಅನುಕೂಲ ಆಗಲಿದೆ. ಸುಸಜ್ಜಿತ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಸಿಗಲಿದೆ. ಸದ್ಯ ವ್ಯಾಪಾರಿಗಳಿಗೆ ಮಾರಾಟಕ್ಕೆ ಸೂಕ್ತ ಸ್ಥಳ ಇರಲಿಲ್ಲ. ಇದನ್ನು ಮನಗಂಡು ಸರ್ಕಾರ ಅವರಿಗೆ ವ್ಯವಸ್ಥೆ ಮಾಡಿಕೊಡುತ್ತಿದೆ. ಈ ಯೋಜನೆಯಿಂದ ಗಾಂಧಿ ಬಜಾರ್ ಸೌಂದರ್ಯವೂ ಹೆಚ್ಚಲಿದೆ’ ಎಂದು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಹೇಳಿದರು.

ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ ವ್ಯಾಪಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. –ಪ್ರಜಾವಾಣಿ ಚಿತ್ರಗಳು/ ಪ್ರಶಾಂತ್ ಎಚ್.ಜಿ

*
ರಸ್ತೆ ಕಾಮಗಾರಿ ಪ್ರಾರಂಭಿಸುವ ಮೊದಲು ದಿನಕ್ಕೆ ₹7 ಸಾವಿರದಿಂದ ₹ 10 ಸಾವಿರದವರೆಗೆ ವ್ಯಾಪಾರ ಆಗುತ್ತಿತ್ತು. ಈಗ ₹ 3 ಸಾವಿರ ವ್ಯಾಪಾರವೂ ಕಷ್ಟವಾಗಿದೆ.
-ತ್ರಿವೇಣಿ, ಹೂವಿನ ವ್ಯಾಪಾರಿ

*
ಬಡವರ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ದಿನಕ್ಕೆ ₹ 500 ವ್ಯಾಪಾರವೂ ಆಗುತ್ತಿಲ್ಲ. ಮನೆ ನಡೆಸುವುದು ಕಷ್ಟವಾಗಿದೆ. ಯಾರನ್ನು ಕೇಳಬೇಕು ಎನ್ನುವುದು ತಿಳಿಯದಾಗಿದೆ.
-ಹನುಮಂತಯ್ಯ, ತರಕಾರಿ ವ್ಯಾಪಾರಿ

*
ವಯಸ್ಸಾದ ನಮಗೆ ಬೇರೆ ಕೆಲಸ ತಿಳಿದಿಲ್ಲ. ಆದ್ದರಿಂದ ದಾರಿ ಕಾಣದಂತಾಗಿದೆ. ಕಾಮಗಾರಿಯಿಂದ ಹೊರಹೊಮ್ಮುವ ದೂಳಿನಿಂದ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ.
-ಧನಲಕ್ಷ್ಮಮ್ಮ, ವ್ಯಾಪಾರಿ

*
ವ್ಯಾಪಾರ ಅರ್ಧದಷ್ಟು ಕಡಿತ ಆಗಿದೆ. ಇದರಿಂದಾಗಿ ಸರಕು ಸಾಮಗ್ರಿಗಳ ದಾಸ್ತಾನನ್ನು ಕಡಿಮೆ ಮಾಡಿಕೊಂಡಿದ್ದೇವೆ. ತಿಂಗಳ ದುಡಿಮೆಯೆಲ್ಲ ಕಟ್ಟಡದ ಬಾಡಿಗೆಗೆ ಹೋಗುತ್ತಿದೆ.
-ಉಮೇಶ್, ಅಂಗಡಿ ಮಾಲೀಕ

*
ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ದೂಳು ಸೇರಿ ವಿವಿಧ ಸಮಸ್ಯೆ ಎದುರಿಸುತ್ತಿದ್ದೇವೆ. ಮೊದಲಿನಂತೆ ಗ್ರಾಹಕರು ಬರುತ್ತಿಲ್ಲ. ಮಳಿಗೆಯ ಬಾಡಿಗೆ ಹೊಂದಿಸುವುದು ಸವಾಲಾಗಿದೆ.
-ಯೋಗೇಶ್, ಅಂಗಡಿ ಮಾಲೀಕ

*
ದೂಳಿನಿಂದ ಕೆಲವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಾಲ ಮಾಡಿ ಖರೀದಿಸಿದ ತರಕಾರಿ ವ್ಯಾಪಾರವಾಗದೆ, ಇಟ್ಟಲ್ಲಿಯೇ ಕೊಳೆಯುತ್ತಿದೆ.
-ಮಂಜುಳಾ, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.