ADVERTISEMENT

ಗಣೇಶೋತ್ಸವ ಅನುಮತಿಗೆ 63 ಏಕಗವಾಕ್ಷಿ ಕೇಂದ್ರ

ಪರಿಸರ ಸ್ನೇಹಿಯಾಗಿ ಹಬ್ಬ ಆಚರಣೆಗೆ ಅಗತ್ಯ ಕ್ರಮ: ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 16:03 IST
Last Updated 23 ಆಗಸ್ಟ್ 2024, 16:03 IST
ಗಣೇಶನ ಮೂರ್ತಿ
ಗಣೇಶನ ಮೂರ್ತಿ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ಅನುಮತಿ ನೀಡಲು 63 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರದು, ಪಾಲಿಕೆ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ತ್ವರಿತವಾಗಿ ನಿಯೋಜಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಗೆ ಸೂಚನೆ ನೀಡಿದರು.

ಗಣೇಶ ಚತುರ್ಥಿ ಆಚರಣೆ ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಅವರು ಶುಕ್ರವಾರ ಸಭೆ ನಡೆಸಿದರು.

ನಿಯೋಜಿಸಿದ ಅಧಿಕಾರಿಗಳ ಮಾಹಿತಿಯುಳ್ಳ ಪಟ್ಟಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಅನುಮತಿ ಕೋರಿ ಬರುವವರಿಗೆ ಕಾಲಮಿತಿಯೊಳಗೆ ಅನುಮತಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಕೆರೆಗಳ ಬಳಿಯಿರುವ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಬೇಕು. ಗಣೇಶ ವಿಸರ್ಜನೆಗಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡುವುದರ ಜೊತೆಗೆ ಬ್ಯಾರಿಕೇಡ್‌, ಸಿಸಿಟಿವಿ ಕ್ಯಾಮೆರಾ, ವಿದ್ಯುತ್ ದೀಪ, ನುರಿತ ಈಜುಗಾರರ ವ್ಯವಸ್ಥೆ, ಕ್ರೇನ್‌ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಹೇಳಿದರು.

ಗಣೇಶ ವಿಸರ್ಜನೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿ ಪರಿಶೀಲಿಸಿ, ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬೀದಿ ದೀಪ ಸರಿಯಾಗಿರುವಂತೆ ಪಾಲಿಕೆ ವಿದ್ಯುತ್ ವಿಭಾಗದ ಅಧಿಕಾರಿಗಳು ನೋಡಿಕೊಳ್ಳಬೇಕು. ರಸ್ತೆ ಹಾಳಾಗಿದ್ದಲ್ಲಿ ಅಥವಾ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದಲ್ಲಿ ಸರಿಪಡಿಸಬೇಕು ಎಂದು ಸೂಚಿಸಿದರು.

ಗಣೇಶ ವಿಸರ್ಜನೆ ಮಾಡುವ ಕಲ್ಯಾಣಿಗಳ ಬಳಿ ಆಂಬುಲೆನ್ಸ್, ಆರೋಗ್ಯ ಸಿಬ್ಬಂದಿ ನಿಯೋಜಿಸಬೇಕು. ಕಲ್ಯಾಣಿಗಳ ಬಳಿ ಗಣೇಶ ವಿಸರ್ಜನೆ ಮಾಡುವ ವೇಳೆ ಇಲಾಖಾವಾರು ನಿಯೋಜನೆ ಮಾಡಿರುವ ಸಿಬ್ಬಂದಿಗೆ ‘ಡ್ರೆಸ್ ಕೋಡ್’ ನೀಡಬೇಕು. ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ವಾರ್ಡ್ ವ್ಯಾಪ್ತಿಯ ಪ್ರಮುಖ ಸ್ಥಳ, ಜಂಕ್ಷನ್‌ಗಳಲ್ಲಿ ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ(ಮೊಬೈಲ್ ಟ್ಯಾಂಕ್) ವ್ಯವಸ್ಥೆ ಮಾಡಬೇಕು ಎಂದರು. 

ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತ ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.

‘ಮೂರ್ತಿ ತಯಾರಿಕಾ ಘಟಕ ಪರಿಶೀಲಿಸಿ’
ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು. ಪಿಒಪಿ ಗಣೇಶ ಮೂರ್ತಿ ತಯಾರಿಸುವುದನ್ನು ನಿಷೇಧಿಸಲಾಗಿದೆ. ಮೂರ್ತಿ ತಯಾರಿಕಾ ಘಟಕಗಳಿಗೆ ಪಾಲಿಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವುದು ಕಂಡು ಬಂದರೆ ವಶಕ್ಕೆ ಪಡೆದು ಅವರಿಗೆ ದಂಡ ವಿಧಿಸಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.