ADVERTISEMENT

ವಿಘ್ನ ನಿವಾರಕನಿಗೆ ಸಾವಿರ ವಂದನೆ

ಕೊರೊನಾ ನಿರ್ಬಂಧ– ಸರಳ ಆಚರಣೆ * ಕೆಲವೆಡೆ ವರ್ಚುವಲ್‌‌ ಗಣೇಶೋತ್ಸವ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 21:04 IST
Last Updated 23 ಆಗಸ್ಟ್ 2020, 21:04 IST
ಜೆ.ಪಿ. ನಗರದ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಪಡೆದರು 
ಜೆ.ಪಿ. ನಗರದ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಪಡೆದರು    

ಬೆಂಗಳೂರು: ಕೋವಿಡ್‌ ನಿರ್ಬಂಧಗಳ ಕಾರಣ ನಗರದಲ್ಲಿ ಗಣೇಶ ಚತುರ್ಥಿಯನ್ನುಶನಿವಾರ ಸರಳವಾಗಿ ಆಚರಿಸಲಾಯಿತು.ನಾಲ್ಕು ಅಡಿಗಿಂತಲೂ ಹೆಚ್ಚು ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿಲ್ಲದ ಪರಿಣಾಮವಾಗಿ ಎಲ್ಲೆಡೆ ಪುಟ್ಟ ಗಣಪನ ಮೂರ್ತಿಗಳೇ ಕಂಡು ಬಂದವು.

ಬಸವನಗುಡಿ ದೊಡ್ಡ ಗಣಪತಿ ದೇವಾಲಯ, ವಿಕ್ಟೋರಿಯಾ ಆಸ್ಪತ್ರೆ ಮುಂಭಾಗದ ಧನ್ವಂತರಿ ಗಣಪತಿ, ಜೆ.ಪಿ.ನಗರದ ಸತ್ಯಸಾಯಿ ಗಣಪತಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್ 108 ಗಣಪತಿ ದೇವಸ್ಥಾನ, ಜಯನಗರ 4ನೇ ಬ್ಲಾಕ್‌ನಲ್ಲಿರುವ ಶ್ರೀ ವಿನಾಯಕ ದೇವಸ್ಥಾನ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿರುವ ಗಣಪತಿ ದೇವಾಲಯಗಳಲ್ಲಿ ಗಣಪತಿ ಹೋಮ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಬಿಬಿಂಎಪಿಯು ಒಂದು ದಿನ ಮಾತ್ರ ಮೂರ್ತಿಯನ್ನು ಕೂರಿಸಲು ಅನುಮತಿ ನೀಡಿದ್ದರಿಂದ ಹೆಚ್ಚಿನ ಜನ ವಿನಾಯಕ‌ ಚೌತಿಯ ದಿನವೇ ಬೆಳಿಗ್ಗೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಜೆಯ ವೇಳೆಗೆ ವಿಸರ್ಜನೆ ಮಾಡಿದರು.

ADVERTISEMENT

ಹಲಸೂರು, ವಿಲ್ಸನ್ ‌ಗಾರ್ಡನ್, ಅಕ್ಕಿಪೇಟೆ, ನಗರ್ತಪೇಟೆ ಸೇರಿ ಪ್ರಮುಖ ಬಡಾವಣೆಗಳಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಗಣೇಶೋತ್ಸವಗಳು ಕೂಡ ಸರಳವಾಗಿ ನಡೆದವು.ಗಣೇಶ ದೇಗುಲಗಳಲ್ಲಿ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಥರ್ಮಲ್‌ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ‌

ಮೂರ್ತಿ ವಿಸರ್ಜನೆಗೆ ಅವಕಾಶ

ಜಯನಗರ, ಜೆ.ಪಿ.ನಗರ, ಗಿರಿನಗರ ಸೇರಿ ನಗರದೆಲ್ಲಡೆ ವಿನಾಯಕ ಮೂರ್ತಿ ವಿಸರ್ಜನೆಗೆ ಸ್ಥಳೀಯ ಸಂಘ- ಸಂಸ್ಥೆಗಳಿಂದ ವಾಹನಗಳಲ್ಲಿ ನೀರಿನ ಡ್ರಮ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲ ಭಾಗಗಳಲ್ಲಿ ಬೃಹತ್ ಗಾತ್ರದ ಪಾತ್ರೆ‌ಗಳನ್ನು ಇರಿಸಿ ಮೂರ್ತಿ‌ಗಳನ್ನು ಅದರಲ್ಲಿ ಬಿಡುವ ವ್ಯವಸ್ಥೆ ಮಾಡಿದ್ದರು.

ನಗರದ ಬಹುತೇಕ ಪ್ರದೇಶಗಳಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳನ್ನು ನೇರಪ್ರಸಾರದಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಂಗಳೂರು ಗಣೇಶೋತ್ಸವ ಕೂಡ ಈ ಬಾರಿ ವರ್ಚುವಲ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.