ADVERTISEMENT

ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 19:55 IST
Last Updated 28 ಆಗಸ್ಟ್ 2019, 19:55 IST

ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ‘ಬೆಂಗಳೂರು ಗಣೇಶ ಉತ್ಸವ’ ನಡೆಸು
ವುದಕ್ಕೆ ನೀಡಲಾಗಿರುವ ಪರವಾನಗಿ ಪತ್ರವನ್ನು ಕೋರ್ಟ್‌ಗೆ ಹಾಜರುಪಡಿಸಿ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ‘ಶಂಕರಪುರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ.ಎಲ್‌.ಎನ್‌.ರಾವ್‌, ‘ಗಣೇಶ ಉತ್ಸವ ನಡೆಸಲು ಶ್ರೀ ವಿದ್ಯಾರಣ್ಯ ಯುವಕ ಸಂಘಕ್ಕೆ 11 ದಿನಗಳ ಅನುಮತಿ ನೀಡಲಾಗಿದೆ. ಇದು ಬಿಬಿಎಂಪಿ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಸಾರ್ವಜನಿಕರಿಗೆ ಅನನುಕೂಲ ಉಂಟು ಮಾಡಲಿದೆ’ ಎಂದು ಆಕ್ಷೇಪಿಸಿದರು.

ADVERTISEMENT

‘ಗಣೇಶ ಪೆಂಡಾಲ್‌ ನೆಪದಲ್ಲಿ ಮೈದಾನದ ತುಂಬಾ ತಿಂಡಿ ಮಳಿಗೆಗಳು, ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಆಜುಬಾಜಿನಲ್ಲಿ ನಾಲ್ಕು ಪ್ರಮುಖ ಆಸ್ಪತ್ರೆ, ಕಾಲೇಜುಗಳಿವೆ. ಅಲ್ಲದೇ ಇಲ್ಲಿ ಜಮಾಯಿಸುವ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆಯಂತಹ ಮೂಲ ಸೌಕರ್ಯಗಳೂ ಇರುವುದಿಲ್ಲ’ ಎಂದು ದೂರಿದರು.

‘ಈ ಬಗ್ಗೆ ಮಾಹಿತಿ ಒದಗಿಸಿ’ ಎಂದು ಬಿಬಿಎಂಪಿ ಪರ ವಕೀಲೆ ಎಂ.ಸಿ.ನಾಗಶ್ರೀ ಅವರಿಗೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಗುರುವಾರಕ್ಕೆ (ಆ.29) ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.