ADVERTISEMENT

ಕಸದ ಕೂಪವಾಗುತ್ತಿದೆ ಕುಮಾರಸ್ವಾಮಿ ಬಡಾವಣೆ

ಪೃಥ್ವಿರಾಜ್ ಎಂ ಎಚ್
Published 29 ಅಕ್ಟೋಬರ್ 2019, 19:45 IST
Last Updated 29 ಅಕ್ಟೋಬರ್ 2019, 19:45 IST
ಪಾಳು ಬಿದ್ದಿರುವ ಉದ್ಯಾನ
ಪಾಳು ಬಿದ್ದಿರುವ ಉದ್ಯಾನ   

ಕುಮಾರಸ್ವಾಮಿ ಬಡಾವಣೆಯಲ್ಲಿನ ಬಹುತೇಕ ಖಾಲಿ ನಿವೇಶನಗಳು ಕಸ ಸುರಿಯುವ ಪ್ರದೇಶಗಳಾಗಿ ಬದಲಾಗುತ್ತಿವೆ. ಪ್ರಮುಖ ರಸ್ತೆಗಳು, ಆಟದ ಮೈದಾನ, ಮಕ್ಕಳ ಉದ್ಯಾನವೂ ಕಸಮಯವಾಗುತ್ತಿವೆ. ವ್ಯಾಸರಾಯ ಬಲ್ಲಾಳ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸ ಸುರಿಯುವ ಸ್ಥಳಗಳು ಸೃಷ್ಠಿಯಾಗುತ್ತಿವೆ.

ಗಣೇಶ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಆಟದ ಮೈದಾನದ ಮೂಲೆಯಲ್ಲಿ ಕಸದ ರಾಶಿಯೇ ಬಿದ್ದಿದೆ. ದೇವಸ್ಥಾನದ ಹಿಂಭಾಗದ ಬೀದಿಯುದ್ದಕ್ಕೂ ಖಾಲಿ ಬಾಟಲಿಗಳು ಬಿದ್ದಿವೆ. ವಾಸವಿ ಆಸ್ಪತ್ರೆ ಸುತ್ತಮುತ್ತಲಿರುವ ಖಾಲಿ ನಿವೇಶನಗಳೆಲ್ಲಾ ಕಸಮಯವಾಗುತ್ತಿವೆ.

‘ಪೌರಕಾರ್ಮಿಕರು ನಿತ್ಯ ಬರುತ್ತಾರೆ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಾರೆ, ಮನೆ ಗಳಿಂದ ಕಸ ಸಂಗ್ರಹಿಸುತ್ತಾರೆ. ಆದರೆ ಕೆಲವರು ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿದ್ದಾರೆ. ಹೀಗಾಗಿ ಎಲ್ಲೆಂದರಲ್ಲಿ ಕಸ ಸಂಗ್ರಹವಾಗುತ್ತಿದೆ’ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ADVERTISEMENT

ಬಡಾವಣೆಯ 15ಇ ನಿಲ್ದಾಣದಲ್ಲೂ ಕಸ ತುಂಬಿಕೊಂಡಿದೆ. ಗ್ರಂಥಾಲಯದ ಪಕ್ಕದಲ್ಲಿರುವ ಪಾದಚಾರಿ ಮಾರ್ಗದ ಮೇಲೆ ಎದ್ದು ಕಾಣುವಂತೆ ಕಸ ಬಿದ್ದಿದೆ. ಈಚೆಗೆ ಮಳೆ ಹೆಚ್ಚಾಗಿ ಸುರಿಯುತ್ತಿರುವ ಪರಿಣಾಮ ಕಸವೆಲ್ಲಾ ಕೊಳೆತು ನಾರುತ್ತಿದೆ. ಇದರಿಂದ ಖಾಲಿ ನಿವೇಶನಗಳಿಗೆ ಹೊಂದಿಕೊಂಡಂತೆ ಮನೆ ನಿರ್ಮಿಸಿಕೊಂಡಿರುವವರು ಮೂಗು ಮುಚ್ಚಿಕೊಂಡು ವಾಸಿಸಬೇಕಾದ ಪರಿಸ್ಥಿತಿ ಇದೆ.

ಪಾಳು ಬಿದ್ದ ಉದ್ಯಾನ

ಮಕ್ಕಳಿಗಾಗಿ ಸುಮಾರು 15 ತಿಂಗಳ ಹಿಂದೆ ನಿರ್ಮಿಸಿದ ಉದ್ಯಾನವೂ ಕಸದ ಕೂಪವಾಗುತ್ತಿದೆ. ಅಳವಡಿಸಿದ್ದ ಆಟಿಕೆಗಳೆಲ್ಲವೂ ಮುರಿದುಬಿದ್ದಿವೆ. ಉದ್ಯಾನದ ತುಂಬೆಲ್ಲಾ ಕಳೆಗಿಡಗಳು, ಕಾಂಗ್ರೆಸ್‌ ಗಿಡಗಳು ಬೆಳೆದು ನಿಂತಿವೆ. ಉದ್ಯಾನದ ಮುಂದೆಯೇ ಕಸವನ್ನು ತಂದು ಸುರಿಯಲಾಗುತ್ತಿದೆ. ಇಲ್ಲಿ ಬರುವ ಮಕ್ಕಳು ಕಸದಲ್ಲೇ ಆಟವಾಡಬೇಕಾದ ಪರಿಸ್ಥಿತಿ ಇದೆ. ಉದ್ಯಾನ ಈ ರೀತಿ ಪಾಳು ಬೀಳುವುದಕ್ಕೆ ನಿರ್ವಹಣೆ ಇಲ್ಲದಿರುವುದೇ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ.

***

ದೂರು ಕೊಟ್ಟರೂ ಪ್ರಯೋಜನವಿಲ್ಲ

ನಾವು ನೃತ್ಯ ತರಬೇತಿ, ರೂಬಿಕ್ ಕ್ಯೂಬ್ಸ್ ಸಾಲ್ವಿಂಗ್ ತರಗತಿಗಳನ್ನು ನಡೆಸುತ್ತಿದ್ದೇವೆ. ನಮ್ಮ ಶಿಕ್ಷಣ ಕೇಂದ್ರ ಇರುವ ಮುಂಭಾಗದಲ್ಲೇ ಕಸದ ರಾಶಿ ಬಿದ್ದಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದೇವೆ. ದೂರು ನೀಡಿದ ಮರುದಿನ ಬಂದು ಕಸ ಎತ್ತಿದರೂ ಮತ್ತೆ ಕಸ ತಂದು ಸುರಿಯುತ್ತಾರೆ. ಖಾಲಿ ನಿವೇಶನಗಳಲ್ಲಿ ಕಸ ಸುರಿಯದಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ದೊಡ್ಡಮೋರಿಗೆ ಹೊಂದಿಕೊಂಡಿರುವ ರಸ್ತೆ ಈಚೆಗೆ ಸುರಿದ ಮಳೆಯಿಂದಾಗಿ ಹದಗೆಟ್ಟಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ದೊಡ್ಡ ಗುಂಡಿ ಕೂಡ ಬಿದ್ದಿದೆ. ಮಳೆ ಬಂದಾಗ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ಆಗ ಗುಂಡಿ ಇರುವುದು ಗೊತ್ತಾಗುವುದಿಲ್ಲ. ಪುಟ್ಟ ಮಕ್ಕಳು ನಡೆದುಕೊಂಡು ಹೋಗುವಾಗ ಗುಂಡಿಗೆ ಬೀಳುವ ಅಪಾಯವೂ ಇದೆ. ಇದನ್ನಾದರೂ ಸರಿಪಡಿಸಿ ಎಂದು ದೂರು ನೀಡಿದರು ಯಾವ ಪ್ರಯೋಜನವೂ ಆಗಿಲ್ಲ.

ಚೈತ್ರಾ, ಮಹಾಲಸಾ ಬ್ರೈನ್‌ಎಕ್ಸ್‌, ಕುಮಾರಸ್ವಾಮಿ ಬಡಾವಣೆ.

***

ಜನರಲ್ಲಿ ಪ್ರಜ್ಞೆ ಇರಬೇಕು

ನಾನು ನೋಡಿದ ಹಾಗೆ ನಿತ್ಯ ಪೌರಕಾರ್ಮಿಕರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ರಾತ್ರಿ ವೇಳೆಯಲ್ಲಿ, ಯಾರೂ ನೋಡದ ಸಂದರ್ಭದಲ್ಲಿ ನಿವಾಸಿಗಳೇ ಬಂದು ಕಸ ಸುರಿಯುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಸುರಿಯಬಾರದು ಎಂಬ ಪ್ರಜ್ಞೆ ಜನರಲ್ಲಿ ಇರಬೇಕು. ಇಲ್ಲದಿದ್ದರೆ ರಸ್ತೆಗಳೆಲ್ಲಾ ಕಸಮಯವಾಗುತ್ತವೆ.

ರಾಜು, ಯಕ್ಷೇಶ್ವರಿ ಕಾಂಡಿಮೆಂಟ್ಸ್‌, ಕುಮಾರಸ್ವಾಮಿ ಬಡವಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.