ಬಿಬಿಎಂಪಿ
ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ‘ಸಮಗ್ರ ಘನತ್ಯಾಜ್ಯ ನಿರ್ವಹಣೆ’ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಿರುವ ಬಿಬಿಎಂಪಿ, ಮುಂದಿನ 30 ವರ್ಷದ ಅವಧಿಗೆ ₹90 ಸಾವಿರ ಕೋಟಿ ಮೊತ್ತದ ಗುತ್ತಿಗೆ ನೀಡಲು ತಯಾರಿ ನಡೆಸಿದೆ.
ಬೆಂಗಳೂರಿನಲ್ಲಿ ಪ್ರತಿನಿತ್ಯ 3,500 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರ ನಿರ್ವಹಣೆಗೆ ಸದ್ಯ ವರ್ಷಕ್ಕೆ ₹450 ಕೋಟಿ ವೆಚ್ಚ ಮಾಡಲಾಗುತ್ತಿದೆ. 2022ರಲ್ಲಿ ಕರೆದ ಹೊಸ ಪ್ಯಾಕೇಜ್ ಅನುಸಾರ ಈ ಮೊತ್ತವು ₹510 ಕೋಟಿ ಎಂದು ಟೆಂಡರ್ ದಾಖಲೆಗಳಲ್ಲಿ ಪ್ರಸ್ತಾವಿಸಲಾಗಿದೆ. ಬಿಬಿಎಂಪಿಯು ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ತಯಾರಿ ನಡೆಸಿದೆ. ಪ್ರತಿನಿತ್ಯ 6,571 ಟನ್ ಉತ್ಪತ್ತಿಯಾಗಬಹುದು ಎಂದು ಅಂದಾಜಿಸಿ, ಬೃಹತ್ ಮೊತ್ತಕ್ಕೆ ಟೆಂಡರ್ ಕರೆಯುವ ಸಿದ್ಧತೆ ನಡೆಸಿದೆ. ಹೊಸ ವ್ಯವಸ್ಥೆ ಜಾರಿಯಾದರೆ, ಪ್ರತಿ ವರ್ಷ ₹3,163 ಕೋಟಿ ವೆಚ್ಚವಾಗಲಿದೆ.
ಬೆಂಗಳೂರಿನ ಘನತ್ಯಾಜ್ಯ ವಿಲೇವಾರಿ, ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್ (ಬಿಎಸ್‌ಡಬ್ಲ್ಯುಎಂಎಲ್) ಕಂಪನಿ ಹೊಸ ವ್ಯವಸ್ಥೆಯನ್ನು ನಾಲ್ಕು ಪ್ಯಾಕೇಜ್‌ಗಳಲ್ಲಿ ಜಾರಿಗೆ ತರಲು ಉದ್ದೇಶಿಸಿದೆ. ಇದಕ್ಕಾಗಿ, ರೈಟ್ಸ್ ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿದೆ. ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಮನೆಗಳಿಂದ ತ್ಯಾಜ್ಯ ಸಂಗ್ರಹ, ಎರಡನೇ ಹಂತದ ವರ್ಗಾವಣೆ ಕೇಂದ್ರಗಳಿಗೆ ವಿಲೇವಾರಿ, ಆ ಕೇಂದ್ರಗಳಿಂದ ಸಂಸ್ಕರಣೆ ಕೇಂದ್ರಗಳಿಗೆ ತ್ಯಾಜ್ಯ ಸಾಗಣೆ ಮತ್ತು ವಿಲೇವಾರಿ ಮಾಡಲು ‘ಸಮಗ್ರ ಘನತ್ಯಾಜ್ಯ ನಿರ್ವಹಣೆ’ ವ್ಯವಸ್ಥೆಯನ್ನು ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ರೂಪಿಸಲಾಗಿದೆ. ಎರಡನೇ ಹಂತದ ಕೇಂದ್ರಗಳು ಹಾಗೂ ಸಂಸ್ಕರಣೆ ಕೇಂದ್ರಕ್ಕೆ ಅಗತ್ಯ ಭೂಮಿ, ಅಲ್ಲಿ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿ ಬಿಬಿಎಂಪಿಯದ್ದಾಗಿರುತ್ತದೆ.
ಹೊಸ ವ್ಯವಸ್ಥೆಯಲ್ಲಿ ಗುತ್ತಿಗೆ ಜಾರಿಯಾದ ಮೇಲೆ, ಬಿಬಿಎಂಪಿ, ಗುತ್ತಿಗೆದಾರರು, ಬ್ಯಾಂಕರ್‌ಗಳ ನಡುವೆ ಒಪ್ಪಂದವಾಗಿ ‘ಎಸ್ಕ್ರೋ ಖಾತೆ’ಯನ್ನು ತೆರೆಯಬೇಕು. ಬಿಬಿಎಂಪಿ ಮೂರು ತಿಂಗಳ ಬಿಲ್ ಮೊತ್ತವನ್ನು ಮುಂಗಡವಾಗಿ ಈ ಖಾತೆಯಲ್ಲಿ ಸದಾಕಾಲ ಇರಿಸಿರಬೇಕು. 30 ವರ್ಷದ ಗುತ್ತಿಗೆಯಲ್ಲಿ ಪ್ರತಿ ವರ್ಷ ಶೇ 10ರಷ್ಟು ಮೊತ್ತವನ್ನು ಹೆಚ್ಚಿಸಬೇಕು. 30 ವರ್ಷದ ನಂತರ ಮತ್ತೆ 30 ವರ್ಷಕ್ಕೆ ಗುತ್ತಿಗೆಯನ್ನು ನವೀಕರಿಸಬಹುದು. ಹೊಸ ವ್ಯವಸ್ಥೆ ಜಾರಿಯಾದರೆ, ಪ್ರತಿ ಮನೆಯಿಂದ ತ್ಯಾಜ್ಯ ಸಂಗ್ರಹ ಶುಲ್ಕವನ್ನು ಗುತ್ತಿಗೆದಾರರು ಸಂಗ್ರಹಿಸಬೇಕು ಎಂಬ ನಿಯಮಗಳನ್ನೂ ಡಿಪಿಆರ್‌ನಲ್ಲಿ ನಮೂದಿಸಲಾಗಿದೆ.
₹450 ಕೋಟಿ ವೆಚ್ಚ: ಪ್ರಸ್ತುತ ಬಿಬಿಎಂಪಿಯಲ್ಲಿ ಎರಡನೇ ಹಂತದ ವರ್ಗಾವಣೆ ಕೇಂದ್ರ, ಪೌರ ಕಾರ್ಮಿಕರ ವೇತನ ಹೊರತಾಗಿ ₹450 ಕೋಟಿಯನ್ನು ತ್ಯಾಜ್ಯ ವಿಲೇವಾರಿಗೆ ವೆಚ್ಚ ಮಾಡಲಾಗುತ್ತಿದೆ.
89 ಪ್ಯಾಕೇಜ್: 198 ವಾರ್ಡ್‌ಗಳನ್ನು 89 ಪ್ಯಾಕೇಜ್‌ಗಳಾಗಿ ವಿಂಗಡಿಸಿ, ಸುಮಾರು 3,500 ಟನ್ ಘನತ್ಯಾಜ್ಯ ನಿರ್ವಹಣೆಗೆ ₹450 ಕೋಟಿ ವೆಚ್ಚದ ಟೆಂಡರ್ ಅನ್ನು ಬಿಬಿಎಂಪಿ 2022ರಲ್ಲಿ ಆಹ್ವಾನಿಸಿದೆ. ಹೈಕೋರ್ಟ್‌ಗೆ ಪ್ರತಿ ಹಂತದಲ್ಲೂ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಟೆಂಡರ್ ಪ್ರಕ್ರಿಯೆಯ ತಾಂತ್ರಿಕ ಬಿಡ್ ಮತ್ತು ಆರ್ಥಿಕ ಬಿಡ್‌ಗಳನ್ನು ತೆರೆದಿದೆ. ಪ್ಯಾಕೇಜ್‌ಗಳಿಗೆ ಹೊಸ ಗುತ್ತಿಗೆದಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬಾಕಿ ಉಳಿದಿದೆ. ಈ ಮಧ್ಯದಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲು ಬಿಎಸ್‌ಡಬ್ಲ್ಯುಎಂಎಲ್ ಮುಂದಾಗಿದೆ.
₹15 ಸಾವಿರ ಕೋಟಿ ಕಮಿಷನ್: ಎಚ್‌ಡಿಕೆ
‘30 ವರ್ಷಗಳವರೆಗೆ ಯಾರು ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದೇ ಬಾರಿಗೆ ಸುಮಾರು ₹15 ಸಾವಿರ ಕೋಟಿಯಷ್ಟು ಕಮಿಷನ್ ಬಾಚಿಕೊಳ್ಳಲು ರಾಜ್ಯ ಸರ್ಕಾರ ನಾಲ್ಕು ಪ್ಯಾಕೇಜ್‌ಗಳಲ್ಲಿ ಒಂದೇ ಸಂಸ್ಥೆಗೆ ಗುತ್ತಿಗೆ ನೀಡಲು ಮುಂದಾಗಿದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
‘ಕಪ್ಪುಪಟ್ಟಿಯಲ್ಲಿರುವ ಸಂಸ್ಥೆಗೆ ಗುತ್ತಿಗೆ’
‘ಸಮಗ್ರ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಹೆಸರಿನಲ್ಲಿ ರಾಜ್ಯ ಸರ್ಕಾರವು ಸುಮಾರು ₹45 ಸಾವಿರ ಕೋಟಿ ಹಣವನ್ನು ತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಹೆಚ್ಚಾಗಿ ವೆಚ್ಚ ಮಾಡಲು ಮುಂದಾಗಿದೆ. ಕಪ್ಪುಪಟ್ಟಿಯಲ್ಲಿರುವ ರಾಮ್‌ಕೀ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಗೆ 30 ವರ್ಷಕ್ಕೆ ಗುತ್ತಿಗೆಯನ್ನು ಗುತ್ತಿಗೆ ನೀಡಲು ಅನುವಾಗುವಂತೆ ಎಲ್ಲ ನಿಯಮಗಳನ್ನೂ ರೂಪಿಸಿದೆ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್ ಎನ್.ಆರ್. ದೂರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು ‘ರೈಟ್ಸ್ ಸಂಸ್ಥೆ ಈಗಾಗಲೇ ಹೊಸ ವ್ಯವಸ್ಥೆಗೆ ಡಿಪಿಆರ್ ಸಲ್ಲಿಸಿದೆ. ಮಂಡೂರು ದೊಡ್ಡಬಳ್ಳಾಪುರ ಗೊಲ್ಲಹಳ್ಳಿ ಮತ್ತು ಬಿಡದಿ ಪ್ರದೇಶಗಳಲ್ಲಿ ತಲಾ 100ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಬಿಬಿಎಂಪಿ ಖರೀದಿಸಿ ಮೂಲಸೌಕರ್ಯದೊಂದಿಗೆ ಗುತ್ತಿಗೆದಾರರಿಗೆ ನೀಡಲಿದೆ. ನಗರದಲ್ಲಿ 3500 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದರೂ 6571 ಟನ್ ನಿರ್ವಹಣೆಗೆ ವೆಚ್ಚ ನೀಡಲು ಯೋಜಿಸಲಾಗಿದೆ. ಈಗ ಇರುವ ಪ್ರತಿ ಟನ್‌ಗೆ ₹260 ಟಿಪ್ಪಿಂಗ್ ಶುಲ್ಕವನ್ನು ₹650ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.