ADVERTISEMENT

ಶೆಟ್ಟಿಹಳ್ಳಿ ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿ: ನಿರ್ವಹಣೆ ಕೊರತೆ; ರೋಗದ ಭೀತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 19:43 IST
Last Updated 9 ಡಿಸೆಂಬರ್ 2025, 19:43 IST
ಅಬ್ಬಿಗೆರೆಯಿಂದ ಮೇದರಹಳ್ಳಿ ಕಡೆ ತಿರುವಿನ ರಸ್ತೆ ಪಕ್ಕದಲ್ಲಿ ಕಸದ ರಾಶಿ.
ಅಬ್ಬಿಗೆರೆಯಿಂದ ಮೇದರಹಳ್ಳಿ ಕಡೆ ತಿರುವಿನ ರಸ್ತೆ ಪಕ್ಕದಲ್ಲಿ ಕಸದ ರಾಶಿ.   

ಪೀಣ್ಯ ದಾಸರಹಳ್ಳಿ: ಮುಖ್ಯರಸ್ತೆಯ ಪಕ್ಕದಲ್ಲೇ ರಾಶಿ ರಾಶಿ ಕಸ, ಸುತ್ತಲೂ ಗಬ್ಬೆದ್ದು ನಾರುವ ವಾತಾವರಣ, ರಸ್ತೆಯಲ್ಲಿ ಹರಡಿರುವ ಕಸದಲ್ಲಿ ಆಹಾರ ಹುಡುಕುವ ಬಿಡಾಡಿ ದನ ಮತ್ತು ಬೀದಿ ನಾಯಿಗಳು. ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ಒಂದು ಸುತ್ತು ಹಾಕಿದರೆ ಇಂತಹ ಅವ್ಯವಸ್ಥೆ ಕಂಡುಬರುತ್ತದೆ.

ವಾರ್ಡ್ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಯಾಗದ ಕಾರಣ ರಸ್ತೆಯ ಸುತ್ತಮುತ್ತ ಎಲ್ಲೆಂದರಲ್ಲಿ ರಾಶಿಗಟ್ಟಲೆ ಕಸ ಹಾಕುತ್ತಿದ್ದು, ಈ ಪ್ರದೇಶ ತ್ಯಾಜ್ಯದ ವಲಯವಾಗಿ ಮಾರ್ಪಟ್ಟಿದೆ.

ಮೇದರಹಳ್ಳಿ ರೈಲ್ವೆ ಗೇಟ್‌ನಿಂದ ರಾಘವೇಂದ್ರ ಬಡಾವಣೆಗೆ ಹೋಗುವ ದಾರಿಯಲ್ಲಿ, ಅಬ್ಬಿಗೆರೆಯಿಂದ ಮೇದರಹಳ್ಳಿ ಕಡೆ ತಿರುವಿನಲ್ಲಿ, ಶೆಟ್ಟಿಹಳ್ಳಿಯಿಂದ ಸಪ್ತಗಿರಿ ಕಾಲೇಜಿಗೆ ಹೋಗುವ ರಸ್ತೆಯ ಎರಡೂ ಬದಿ, ಚಿಕ್ಕಸಂದ್ರ ಮತ್ತು ಕಮ್ಮಗೊಂಡನಹಳ್ಳಿ ಭಾಗದ ಕಡೆಗಳಲ್ಲಿ ಕಸದ ರಾಶಿಯಿದೆ.

‘ಮಳೆ ಬಂದಾಗ ಕಸವೆಲ್ಲ ಕೊಳೆತು ದುರ್ನಾತದಿಂದ ನೊಣ ಮತ್ತು ಸೊಳ್ಳೆಗಳು ಉತ್ಪತ್ತಿಯಾಗಿ ಅಕ್ಕ ಪಕ್ಕದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕಸದ ಸಮಸ್ಯೆ ಬಗೆಹರಿಸಬೇಕು‘ ಎಂದು ಸಾರ್ವಜನಿಕರು ಆಗ್ರಹಿಸಿದರು.

ಜನರು ವಾಹನಗಳಲ್ಲಿ ಕಸ ತಂದು ಎಸೆದು ಹೋಗುತ್ತಾರೆ. ಅಬ್ಬಿಗೆರೆಯಲ್ಲಿ 20 ಕಡೆಗಳಲ್ಲಿ ಕಸದ ರಾಶಿ ಇದೆ. ಗುತ್ತಿಗೆದಾರರು ಅಧಿಕಾರಿಗಳ ಜೊತೆ ಶಾಮೀಲು ಆಗಿರುವ ಶಂಕೆ ಇದೆ. ಗುತ್ತಿಗೆದಾರರು ಹೋಟೆಲ್, ಅಂಗಡಿಗಳಿಂದ ಮಾತ್ರ ಕಸ ಸಂಗ್ರಹಿಸುತ್ತಾರೆ. ಮನೆಗಳಿಂದ ಕಸ ಸಂಗ್ರಹ ಮಾಡುತ್ತಿಲ್ಲ' ಎಂದು ಸ್ಥಳೀಯ ನಿವಾಸಿ ಅಬ್ಬಿಗೆರೆ ಮಂಜುನಾಥಗೌಡ ಆಕ್ರೋಶ ವ್ಯಕ್ತಪಡಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದರೂ ಕಸದ ಸಮಸ್ಯೆ ಬಗೆಹರಿಯುತ್ತಿಲ್ಲ. ಕೆಲವೆಡೆ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಗುತ್ತಿಗೆದಾರರು ಕೂಡ ಕಸದ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ' ಎಂದು ಸಂಪರ್ಕ ನಾಗರಿಕ ಸೇವೆ ಮತ್ತು ಸಂಘಟನೆ ಅಧ್ಯಕ್ಷ ರಘು ಸೂರ್ಯ ದೂರಿದರು.

‘ಬಳಕೆಯಾಗದ ಹಾಸಿಗೆ, ಬೆಡ್‌ಶೀಟ್‌ ಇತ್ಯಾದಿ ತ್ಯಾಜ್ಯವನ್ನು ಹಾಕುತ್ತಾರೆ. ಕಮ್ಮಗೊಂಡನಹಳ್ಳಿ ರೈಲ್ವೆ ಹಳಿ ಪಕ್ಕದ ರಸ್ತೆ ಬದಿಯಲ್ಲಿ ಕಸದ ರಾಶಿ ಇದೆ. ಇಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಮಾರ್ಷಲ್‌ಗಳನ್ನು ನೇಮಕ ಮಾಡಿ ಕಸ ಎಸೆದವರಿಗೆ ದಂಡ ವಿಧಿಸಿದರೆ ಜನರು ಎಚ್ಚೆತ್ತುಕೊಳ್ಳುತ್ತಾರೆ' ಎಂದು ಸ್ಥಳೀಯ ನಿವಾಸಿ ಕಿಶೋರ್ ಕುಮಾರ್ ತಿಳಿಸಿದರು.

ರಸ್ತೆ ಪಕ್ಕದಲ್ಲಿನ ಕಸದ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.