ಬೆಂಗಳೂರು: ‘ನಗರದಲ್ಲಿ 35 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಗಾರ್ಡನ್ ಸಿಟಿ ವಿಶ್ವವಿದ್ಯಾಲಯವು ಹಲವು ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನೆಲೆಯೂರಿದೆ’ ಎಂದು ಕುಲಾಧಿಪತಿ ವಿ.ಜಿ.ಜೋಸೆಫ್ ತಿಳಿಸಿದರು.
‘ಇಗ್ನೈಟ್ 35: ಎ ಇಯರ್ ಆಫ್ ಐಡಿಯಾಸ್’ ಶೀರ್ಷಿಕೆಯಡಿ ವಿಶ್ವವಿದ್ಯಾಲಯದ 35ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಹಲವು ಚಟುವಟಿಕೆಗಳು ಹಾಗೂ ಲಾಂಛನ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾಲ್ಕೂವರೆ ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಿರುವೆ. ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ಸಣ್ಣದಾಗಿ ಆರಂಭಗೊಂಡಿತು. ಅರ್ಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಅದನ್ನು ಮುಂದುವರಿಸಲಿದೆ’ ಎಂದರು.
‘35ನೇ ವರ್ಷದ ನೆನಪಿನಲ್ಲಿ 35 ಸಾವಿರ ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ವರ್ಷವಿಡೀ ನಡೆಯುವ ಚಟುವಟಿಕೆಗಳಲ್ಲಿ 35 ಸಾಧಕರನ್ನು ಗೌರವಿಸಲಾಗುತ್ತದೆ’ ಎಂದು ಹೇಳಿದರು.
ಜಾದೂಗಾರ ಗೋಪಿನಾಥ್ ಮುತುಕಾಡ್ ಅವರು ‘ಕುತೂಹಲಿಯಾಗಿರು, ಸದಾ ಮುಂದೆ ಇರು, ಪ್ರತಿ ಯಶಸ್ಸಿನ ಹಿಂದಿನ ಗುಟ್ಟು ಹೇಗಿರಬೇಕು’ ಎನ್ನುವ ಬಗ್ಗೆ ಉಪನ್ಯಾಸ ನೀಡಿದರು. ‘ಜ್ಞಾನ, ನಾವೀನ್ಯ ಹಾಗೂ ಸಾಮಾಜಿಕ ಪರಿವರ್ತನೆಗಳತ್ತ ಶಿಕ್ಷಣ ಸಂಸ್ಥೆಗಳು ಗಮನ ನೀಡಬೇಕು. ಗಾರ್ಡನ್ ಸಿಟಿ ವಿಶ್ವವಿದ್ಯಾಲಯವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಕುಲಪತಿ ಎಂ. ರಾಮಚಂದ್ರ ಗೌಡ ಮಾತನಾಡಿ, ‘1992ರ ಫೆಬ್ರವರಿ 27ರಂದು ಆರಂಭವಾದ ಗಾರ್ಡನ್ ಸಿಟಿ ಶಿಕ್ಷಣ ಸಂಸ್ಥೆ, ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.