ADVERTISEMENT

ಉತ್ತರಾಖಂಡ ನೀರ್ಗಲ್ಲು ದುರಂತ; ‘ಎನ್‌ಡಿಆರ್‌ಎಫ್‌ಗೆ ಗರುಡ ಏರೋಸ್ಪೇಸ್‌ ನೆರವು’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 3:44 IST
Last Updated 20 ಫೆಬ್ರುವರಿ 2021, 3:44 IST

ಬೆಂಗಳೂರು: ‘ಉತ್ತರಾಖಂಡದಲ್ಲಿ ನೀರ್ಗಲ್ಲು ಕುಸಿತದ ಪರಿಣಾಮ ಸಂಭವಿಸಿದ ಪ್ರವಾಹ ದುರಂತದಲ್ಲಿ ಸಿಲುಕಿಕೊಂಡವರು ಹಾಗೂ ಮೃತ ದೇಹಗಳನ್ನು ಪತ್ತೆ ಮಾಡಲು ನಮ್ಮ ತಂಡವು ಎನ್‌ಡಿಆರ್‌ಎಫ್‌ಗೆ ನೆರವಾಗುತ್ತಿದೆ’ ಎಂದು ಗರುಡ ಏರೋಸ್ಪೇಸ್‌ ಸಂಸ್ಥೆಯ ಉಪಾಧ್ಯಕ್ಷ ಶಾಶ್ವತ್‌ ಜೈನ್‌ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ತಿಂಗಳ ಮೊದಲ ವಾರ ನಮಗೆ ಎನ್‌ಡಿಆರ್‌ಎಫ್‌ನಿಂದ ಕರೆ ಬಂದಿತ್ತು. ಹೀಗಾಗಿ ನಾಲ್ಕು ಸದಸ್ಯರನ್ನೊಳಗೊಂಡ ತಂಡವನ್ನು ಉತ್ತರಾಖಂಡಕ್ಕೆ ಕಳುಹಿಸಿದ್ದೆವು. ನಮ್ಮ ತಂಡದವರು ಮೂರು ಡ್ರೋನ್‌ಗಳನ್ನು ಬಳಸಿ ರಕ್ಷಣಾ ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಈ ಡ್ರೋನ್‌ಗಳು ವಿಶೇಷ ಸಾಮರ್ಥ್ಯವನ್ನು ಹೊಂದಿವೆ. ದೂರವ್ಯಾಪಿ ಕಣ್ಗಾವಲಿನ ಡ್ರೋನ್‌ ಸರೋ‍ವರದ ರಚನೆ ಮತ್ತು ಬಿರುಕುಗಳನ್ನು ಪತ್ತೆಹಚ್ಚಲು, ಹತ್ತಿರ ವ್ಯಾಪಿ ಕಣ್ಗಾವಲಿನ ಡ್ರೋನ್‌ ದುರಂತದಿಂದಾಗಿರುವ ನಷ್ಟವನ್ನು ಮೌಲ್ಯಮಾಪನ ಮಾಡಲು ಹಾಗೂ ಕಟ್ಟಡ ರಚನಾ ಪರಿಶೀಲನಾ ಡ್ರೋನ್‌ ಜಲವಿದ್ಯುತ್‌ ಸ್ಥಾವರ ಮತ್ತು ಅಣೆಕಟ್ಟೆಗೆ ಆಗಿರುವ ನಷ್ಟವನ್ನು ಅಂದಾಜಿಸಲು ಸಹಕಾರಿಯಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT