ADVERTISEMENT

ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಚುನಾವಣೆ: ಮತದಾರರ ಪಟ್ಟಿ ತಯಾರಿಸಲು ಸೂಚನೆ

ನಗರ ಪಾಲಿಕೆ ಚುನಾವಣೆ: ಆಯೋಗದಿಂದ ಚುನಾವಣಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 14:58 IST
Last Updated 14 ಅಕ್ಟೋಬರ್ 2025, 14:58 IST
ಜಿಬಿಎ
ಜಿಬಿಎ   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು, ಮತದಾರರ ಪಟ್ಟಿ ತಯಾರಿಸುವ ಸಂಬಂಧ ಚುನಾವಣಾಧಿಕಾರಿಗಳನ್ನು ನೇಮಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಚುನಾವಣೆ ನಿಯಮಗಳಂತೆ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಲಾಗಿದೆ.

ರಾಜ್ಯ ಚುನಾವಣಾ ಆಯೋಗವು ಜಿಬಿಎ ಮುಖ್ಯ ಆಯುಕ್ತರನ್ನು ಜಿಲ್ಲಾ ಚುನಾವಣಾ ಅಧಿಕಾರಿ ಎಂದು ನೇಮಿಸಿ, ಐದು ನಗರ ಪಾಲಿಕೆಗಳು ಹಾಗೂ ಅವುಗಳಲ್ಲಿರುವ ಎಲ್ಲ ವಾರ್ಡ್‌ಗಳ ವ್ಯಾಪ್ತಿಯನ್ನು ನೀಡಲಾಗಿದೆ. ಐದು ನಗರ ಪಾಲಿಕೆಗಳ ಆಯುಕ್ತರು ಆಯಾ ನಗರ ಪಾಲಕೆಗಳ ಎಲ್ಲ ವಾರ್ಡ್‌ಗಳಿಗೆ ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿರುತ್ತಾರೆ. 

ADVERTISEMENT

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ವಾರ್ಡ್‌ಗಳ ಚುನಾವಣಾ ಕಾರ್ಯಗಳನ್ನು ವಿದ್ಯುಕ್ತವಾಗಿ ನಿರ್ವಹಿಸಲು ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಮತದಾರರ ನೋಂದಣಿ) ನಿಯಮಗಳು– 2025ರಂತೆ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ತಯಾರಿಸಲು ಆದೇಶಿಸಿದೆ.

ಕಾನೂನು ಬಾಹಿರ: ‘ವಾರ್ಡ್‌ಗಳ ಕರಡು ಅಧಿಸೂಚನೆಗೆ ಆಕ್ಷೇಪ ಸಲ್ಲಿಸಲು ಇನ್ನೂ ಅವಕಾಶವಿದೆ. ವಾರ್ಡ್‌ಗಳ ಅಂತಿಮ ಅಧಿಸೂಚನೆಗೆ ಮುನ್ನವೇ ವಾರ್ಡ್‌ವಾರು  ಮತದಾರರ ಪಟ್ಟಿ ತಯಾರಿಸಲು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿರುವುದು ಕಾನೂನುಬಾಹಿರ. ವಾರ್ಡ್‌ಗಳ ರಚನೆಯಲ್ಲೇ ಸಾಕಷ್ಟು ಗೊಂದಲವಿರುವಾಗ, ಮತದಾರರ ಪಟ್ಟಿ ತಯಾರಿಸಿದರೆ ಇನ್ನಷ್ಟು ಸಮಸ್ಯೆ ಎದರುರಾಗುತ್ತದೆ’ ಎಂದು ಹಿಂದಿನ ಬಿಬಿಎಂಪಿಯ ಆಡಳಿತ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.