ADVERTISEMENT

ಬಳಕೆಯಲ್ಲಿಲ್ಲದ ಜಾಗಗಳಿಗೆ ಮರುಜೀವ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 21:58 IST
Last Updated 6 ಫೆಬ್ರುವರಿ 2026, 21:58 IST
ಸಾರ್ವಜನಿಕ ಸ್ಥಳಗಳ ಪುನರುಜ್ಜೀವನದ ಯೋಜನೆಗಳನ್ನು ಮಹೇಶ್ವರ್‌ ರಾವ್‌ ವೀಕ್ಷಿಸಿದರು. ಬಸರಾಜ ಕಬಾಡೆ ಉಪಸ್ಥಿತರಿದ್ದರು
ಸಾರ್ವಜನಿಕ ಸ್ಥಳಗಳ ಪುನರುಜ್ಜೀವನದ ಯೋಜನೆಗಳನ್ನು ಮಹೇಶ್ವರ್‌ ರಾವ್‌ ವೀಕ್ಷಿಸಿದರು. ಬಸರಾಜ ಕಬಾಡೆ ಉಪಸ್ಥಿತರಿದ್ದರು   

ಬೆಂಗಳೂರು: ನಗರದಲ್ಲಿ ಬಳಕೆಯಲ್ಲಿಲ್ಲದ ಜಾಗಗಳಿಗೆ ಮರುಜೀವ ನೀಡುವ ಉದ್ದೇಶದಿಂದ ಜಿಬಿಎ ಜೊತೆ ನಾಗರಿಕರು ಕೈಜೋಡಿಸಬೇಕು ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಕರೆ ನೀಡಿದರು.

ಜಿಬಿಎ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳ ಪುನರುಜ್ಜೀವನಕ್ಕಾಗಿ ನಾಗರಿಕರಿಗೆ ಮುಕ್ತ ಅವಕಾಶ (ಓಪನ್ ಹೌಸ್) ಕಲ್ಪಿಸುವ ಉದ್ದೇಶದಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಬಳಕೆಯಲ್ಲಿರದ ಅನೇಕ ಜಾಗಗಳಿವೆ. ಇಂತಹ ಜಾಗಗಳನ್ನು ಗುರುತಿಸಿ, ಸರ್ಕಾರ, ಸಿಎಸ್ಆರ್, ಎನ್‌ಜಿಒ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಅವುಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಬೇಕಿದೆ. ನಂತರ ಸ್ಥಳೀಯರೊಂದಿಗೆ ಸೇರಿ ಆ ಜಾಗಗಳನ್ನು ಆಕರ್ಷಕ ಸಾರ್ವಜನಿಕ ಸ್ಥಳಗಳಾಗಿ ಪರಿವರ್ತಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ADVERTISEMENT

ಸ್ಥಳೀಯವಾಗಿ ಬಳಕೆಯಲ್ಲಿಲ್ಲದ ಜಾಗಗಳನ್ನು ಅಭಿವೃದ್ಧಿಪಡಿಸುವಾಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಮಹಿಳೆಯರು ಸ್ವತಂತ್ರವಾಗಿ ಮತ್ತು ಸುರಕ್ಷಿತವಾಗಿ ಓಡಾಡುವ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.

ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಕಾರ್ಯ ಕೈಗೊಳ್ಳಬೇಕು. ನಾಗರಿಕರು ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ಹಾಗೂ ಪಾದಚಾರಿ ಮಾರ್ಗಗಳನ್ನು ಹೆಚ್ಚಾಗಿ ಬಳಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಐದು ನಗರ ಪಾಲಿಕೆಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ನಡೆಸಿ ನಾಗರಿಕರು, ಸ್ಟಾರ್ಟ್ಅಪ್‌ಗಳು ಹಾಗೂ ಸಂಸ್ಥೆಗಳಿಂದ ಸಲಹೆಗಳನ್ನು ಆಹ್ವಾನಿಸಬೇಕು. ಸಮೂಹ ಸಹಕಾರ ಮತ್ತು ಜನ ಪಾಲ್ಗೊಳ್ಳುವಿಕೆಯ ಮೂಲಕ ಉತ್ತಮ ಮತ್ತು ವಾಸಯೋಗ್ಯ ನಗರವನ್ನು ನಿರ್ಮಿಸಬೇಕು ಎಂದು ತಿಳಿಸಿದರು.

ಬಯಸಿದಂತೆ ಬಯಲು ಉಪಕ್ರಮದಲ್ಲಿ ಐದು ನಗರ ಪಾಲಿಕೆಗಳ ಮೂಲಕ ಹಂತ ಹಂತವಾಗಿ ಜಾರಿಗೊಳಿಸುವ ಯೋಜನೆ ರೂಪಿಸಲಾಗಿದೆ. ಅದರ ವಿವರಗಳನ್ನು ಲಿಂಕ್‌ನಲ್ಲಿ (https://www.blrpublicspace-revival.in/repository) ವೀಕ್ಷಿಸಬಹುದು.

‘ಸಹಯೋಗಿ ನಿಧಿ’ ವಿಷಯದ ಕುರಿತು ನಡೆದ ಪ್ಯಾನಲ್ ಚರ್ಚೆಯಲ್ಲಿ ಸಾರ್ವಜನಿಕ ನಿಧಿಗಳಿಗೆ ಪೂರಕವಾಗಿ ಸಿಎಸ್ಆರ್ ಹಾಗೂ ಲೋಕೋಪಕಾರಿ ಬಂಡವಾಳವನ್ನು ಜೋಡಿಸುವ ಕುರಿತು ನಗರ ಯೋಜನಾ ತಜ್ಞರು ಸಲಹೆ ನೀಡಿದರು.

ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್, ಪೂರ್ವ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಎಂಜಿನಿಯರ್‌ಗಳಾದ ಬಸವರಾಜ್ ಕಬಾಡೆ, ಲೋಕೇಶ್, ರವಿ, ಕೃಷ್ಣಮೂರ್ತಿ, ವಿಶ್ವನಾಥ್, ಯಮುನಾ, ಸ್ವಯಂಪ್ರಭಾ, ಹೇಮಲತಾ ಉಪಸ್ಥಿತರಿದ್ದರು.

‘ಚುನಾವಣೆಗೆ ಇವಿಎಂ ಬಳಸಿ’

‘ನಗರ ಪಾಲಿಕೆ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಿದರೆ ಹೆಚ್ಚು ಕಷ್ಟವಾಗುತ್ತದೆ. ಮತಯಂತ್ರದ (ಇವಿಎಂ) ಮೂಲಕ ಚುನಾವಣೆ ನಡೆಸಬೇಕು’ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.

ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಜೊತೆಗೆ ಆಯೋಜಿಸಿದ್ದ ಸಭೆಯಲ್ಲಿ ಪ್ರತಿನಿಧಿಗಳು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೊಬೈಲ್‌ ಸಂಖ್ಯೆ ನಮೂದು ಒಂದೇ ಕುಟುಂಬದ ಮತದಾರರು ಬೇರೆ ಬೇರೆ ಮತಗಟ್ಟೆಗಳಿಗೆ ಮತ್ತು ವಾರ್ಡ್‌ಗಳಿಗೆ ಹಂಚಿಕೆಯಾಗಿರುವುದನ್ನು ಸರಿಪಡಿಸುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದರು.

ನಗರ ಪಾಲಿಕೆ ಚುನಾವಣೆ ನಡೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಆನ್‌ಲೈನ್‌ನಲ್ಲಿರುವ ಸಮಸ್ಯೆ ಬಗೆಹರಿಸಬೇಕು ಮತಗಟ್ಟೆಗಳಲ್ಲಿ ಪ್ರತಿ ತಿಂಗಳು ವಿಶೇಷ ಅಭಿಯಾನ ನಡೆಸಬೇಕು. ಮರಣ ಹೊಂದಿರುವ ಮತ್ತು ಪುನರಾವರ್ತಿತ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ಕೈ ಬಿಡಬೇಕು ಎಂದರು.

ಸಲಹೆ ಸ್ವೀಕರಿಸಿದ ಆಯುಕ್ತ ಡಿ.ಎಸ್.ರಮೇಶ್ ವಿಧಾನಸಭಾ ಮತದಾರ ಪಟ್ಟಿಯೂ ಒಂದಕ್ಕಿಂತ ಹೆಚ್ಚಿನ ವಾರ್ಡ್‌ಗಳ ಮತದಾರ ಪಟ್ಟಿಗೆ ಭಾಗಶಃ ವಿಭಜನೆಯಾಗಿದ್ದಲ್ಲಿ ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು.

‘ಪರಿಶೀಲಿಸಿಕೊಳ್ಳಿ’

‘ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಮತದಾರರು ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬೇಕು. ಆಕ್ಷೇಪಣೆಗಳಿದ್ದಲ್ಲಿ ಸಂಬಂಧ ಪಟ್ಟ ಮತದಾರರ ನೋಂದಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸರಿಪಡಿಸಿಕೊಳ್ಳಬೇ‌ಕು’ ಎಂದು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್‌ಕುಮಾರ್ ತಿಳಿಸಿದರು. ವಾರ್ಡ್ ವಿಂಗಡಣೆ ಮತ್ತು ಆ ಪ್ರಕಾರ ಮತದಾರರ ಪಟ್ಟಿಯು ವೆಬ್‌ಸೈಟ್‌ https://gba.karnataka.gov.in/electoral2026/ ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.