ADVERTISEMENT

ಜಿಬಿಎ: 'ಬಯಸಿದಂತೆ ಬಯಲು' ಯೋಜನೆಯಡಿ ಅಭಿವೃದ್ಧಿಗೊಳಿಸಲು 250 ಸ್ಥಳ ಗುರುತು

ಐದು ನಗರ ಪಾಲಿಕೆಗಳಲ್ಲಿ 194 ಸಾರ್ವಜನಿಕ ಸ್ಥಳಗಳ ಪುನರುಜ್ಜೀವನಕ್ಕೆ ಯೋಜನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 20:58 IST
Last Updated 4 ಫೆಬ್ರುವರಿ 2026, 20:58 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ‘ಬಯಸಿದಂತೆ ಬಯಲು’ ಯೋಜನೆಯಡಿ ನಗರದ ರಸ್ತೆ ಹಾಗೂ ಬೀದಿಗಳ ಮೂಲಸೌಕರ್ಯವನ್ನು ಸಮುದಾಯದ ಅಗತ್ಯಕ್ಕೆ ಅನುಸಾರವಾಗಿ ಅಭಿವೃದ್ಧಿಗೊಳಿಸುವ 250 ಸ್ಥಳಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಗುರುತಿಸಿದೆ.

ರಸ್ತೆ ಹಾಗೂ ಬೀದಿಗಳು ವಾಹನ ಸಂಚಾರದ ಮಾರ್ಗಗಳಾಗಿ ಮಾತ್ರವಲ್ಲದೆ, ವಿವಿಧ ಸಮುದಾಯಗಳ ಅಗತ್ಯಗಳನ್ನು ಪೂರೈಸುವಂತೆ ಎಲ್ಲರನ್ನೂ ಒಳಗೊಂಡ, ಜನಕೇಂದ್ರಿತ ಸಾರ್ವಜನಿಕ ಸ್ಥಳಗಳಾಗಿ ಪರಿವರ್ತಿಸುವುದೇ ಯೋಜನೆಯ ಉದ್ದೇಶವಾಗಿದೆ.

ADVERTISEMENT

ಈ ಉಪಕ್ರಮದ ಅಂಗವಾಗಿ, ತಮ್ಮ ನೆರೆಹೊರೆಯಲ್ಲಿರುವ ಕಡಿಮೆ ಬಳಕೆಯಾಗುತ್ತಿರುವ ಅಥವಾ ಬಳಕೆಯಲ್ಲಿಲ್ಲದ ಸಾರ್ವಜನಿಕ ಸ್ಥಳಗಳನ್ನು ಗುರುತಿಸಲು ನಾಗರಿಕರಿಗೆ ಸಾರ್ವಜನಿಕ ಆಹ್ವಾನ ನೀಡಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಗರ ವಿನ್ಯಾಸಕಾರರು, ವಾಸ್ತುಶಿಲ್ಪಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು 250ಕ್ಕೂ ಅಧಿಕ ಸ್ಥಳಗಳನ್ನು ಗುರುತಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯ ನಂತರ, 194 ಸ್ಥಳಗಳನ್ನು ಕಾರ್ಯಗತಗೊಳಿಸಬಹುದಾದ ಸ್ಥಳಗಳೆಂದು ಗುರುತಿಸಲಾಗಿದೆ. ‘ನಗರಮಟ್ಟದ ಸಾರ್ವಜನಿಕ ಸಂಗ್ರಹ’ದಲ್ಲಿ ಇವುಗಳನ್ನು ಸೇರಿಸಲಾಗಿದ್ದು, ಐದು ನಗರ ಪಾಲಿಕೆಗಳ ಮೂಲಕ ಹಂತ ಹಂತವಾಗಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಜಿಬಿಎ ತಿಳಿಸಿದೆ.

ಹಿಂದಿನ ಬಿಬಿಎಂಪಿ, ‘ಸೆನ್ಸಿಂಗ್ ಲೋಕಲ್ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಡಿಸೈನರ್ಸ್ ಇಂಡಿಯಾ – ಕರ್ನಾಟಕ ಘಟಕದ’ದ ಸಹಯೋಗದಲ್ಲಿ, ಕಳೆದ ಮೇನಲ್ಲಿ ‘ಬಯಸಿದಂತೆ ಬಯಲು’ ಯೋಜನೆಯಡಿ ‘ನಗರದ ಸಾರ್ವಜನಿಕ ಸ್ಥಳಗಳ ಪುನರುಜ್ಜೀವನ’ ಎಂಬ ಉಪಕ್ರಮವನ್ನು ಆರಂಭಿಸಿತ್ತು.

ಈ ಉಪಕ್ರಮದ ಜೊತೆಗೆ, ಸ್ಥಳೀಯ ಪರಿಸ್ಥಿತಿ ಮೌಲ್ಯಮಾಪನ ಹಾಗೂ ವಿವರವಾದ ಸ್ಥಳ ಪರಿಶೀಲನಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತಾವಿತ ಸ್ಥಳಗಳು ಸ್ಥಳೀಯ ನಾಗರಿಕರ ನೈಜ ಅನುಭವಗಳ ಆಧಾರದಲ್ಲಿದ್ದು, ಸಣ್ಣದಾದರೂ ಸಂದರ್ಭೋಚಿತ ವಿನ್ಯಾಸಗಳ ಮೂಲಕ ದಿನನಿತ್ಯದ ಸಾರ್ವಜನಿಕ ಜೀವನದಲ್ಲಿ ಅರ್ಥಪೂರ್ಣ ಹಾಗೂ ದೀರ್ಘಕಾಲೀನ ಸುಧಾರಣೆ ತರಲು ಅವಕಾಶ ಕಲ್ಪಿಸುತ್ತವೆ. ಈವರೆಗೆ, ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದಡಿ 25 ಸ್ಥಳಗಳಿಗೆ ಹಣಕಾಸು ಅನುಮೋದನೆ ನೀಡಲಾಗಿದೆ. ನೆರೆಹೊರೆಯ ಸಾರ್ವಜನಿಕ ಸ್ಥಳಗಳ ಸುಧಾರಣೆಗೆ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಜೊತೆಗೆ, ಈ ಉಪಕ್ರಮವನ್ನು ಮತ್ತಷ್ಟು ವಿಸ್ತರಿಸುವ ಬದ್ಧತೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಂದಿದೆ ಎಂದು ತಿಳಿಸಲಾಗಿದೆ.

ಹೂಡಿಕೆಗೆ ‘ಓಪನ್‌ ಹೌಸ್‌’
ನಗರ ಪಾಲಿಕೆಗಳು, ಹಣಕಾಸು ಒದಗಿಸುವ ಸಂಸ್ಥೆಗಳು, ಸಿಎಸ್‌ಆರ್ ಪಾಲುದಾರರು, ಪರೋಪಕಾರಿ ವ್ಯಕ್ತಿಗಳು/ಸಂಸ್ಥೆಗಳು ಹಾಗೂ ನಾಗರಿಕರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ಜಿಬಿಎ ‘ನಾಗರಿಕರಿಗೆ ಮುಕ್ತ ಅವಕಾಶ’ (ಓಪನ್‌ ಹೌಸ್‌) ಕಾರ್ಯಕ್ರಮ ಆಯೋಜಿಸಿದೆ. ಈ ಮೂಲಕ ಹೂಡಿಕೆಗೆ ಸಿದ್ಧವಾಗಿರುವ ಸಾರ್ವಜನಿಕ ಸ್ಥಳಗಳ ಯೋಜನೆಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ವರ್ಷದ ಅನುದಾನದಲ್ಲಿ ನಗರ ಪಾಲಿಕೆಗಳು ಹೆಚ್ಚಿನ ಪರಿಣಾಮ ಬೀರುವ ಆಯ್ದ ಯೋಜನೆಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದರ ಜೊತೆಗೆ, ಅವು ಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಹಭಾಗಿತ್ವಕ್ಕೆ ಅವಕಾಶ ನೀಡಲಿದೆ. ಓಪನ್‌ ಹೌಸ್‌ ಕಾರ್ಯಕ್ರಮ, ಪುರಭವನದಲ್ಲಿ ಫೆಬ್ರುವರಿ 6 ಮತ್ತು 7ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.