ADVERTISEMENT

ಜಿಬಿಜಿ ಕಾಯ್ದೆ ಬೆಂಗಳೂರು ನಗರ ಆಡಳಿತಕ್ಕೆ ಮಾದರಿ: ರಿಜ್ವಾನ್ ಅರ್ಷದ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 19:26 IST
Last Updated 12 ಅಕ್ಟೋಬರ್ 2025, 19:26 IST
ರಿಜ್ವಾನ್ ಅರ್ಷದ್
ರಿಜ್ವಾನ್ ಅರ್ಷದ್   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯು ನಗರ ಆಡಳಿತಕ್ಕೆ ಮಾದರಿ ಆಗಿದೆ’ ಎಂದು ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದರು. 

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ಮತ್ತು ಜನಾಗ್ರಹ ಶನಿವಾರ ಆಯೋಜಿಸಿದ್ದ ‘ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಜಿ) ಕಾಯ್ದೆ ಬೆಂಗಳೂರಿಗೆ ಫಲ ನೀಡಬಹುದೇ?’ ಎಂಬ ಸಂವಾದದಲ್ಲಿ ಅವರು ಮಾತನಾಡಿದರು. 

‘ಬೆಂಗಳೂರು ನಗರದ ಅಭಿವೃದ್ಧಿಗೆ ಕೆಲಸ ಮಾಡುವ ನಿಗಮಗಳು, ವಿವಿಧ ಸರ್ಕಾರಿ ಒಡೆತನದ ಸಂಸ್ಥೆಗಳ ನಡುವೆ ವಿಕೇಂದ್ರಿಕರಣ, ಏಕೀಕರಣ ಮತ್ತು ಸಮನ್ವಯ ಸಾಧಿಸಲು ಜಿಬಿಜಿ ಕಾಯ್ದೆಯನ್ನು ಮಾಡಲಾಗಿದೆ. ಇದು ಬೆಂಗಳೂರಿನ ನಾಗರಿಕರ ಆಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.  

ADVERTISEMENT

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಜಿಬಿಜಿ ಮಸೂದೆಯು ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಇದು ಕೆಲವರ ಕೈಯಲ್ಲಿ ಮಾತ್ರ ಅಧಿಕಾರವನ್ನು ಕೇಂದ್ರೀಕರಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಬ್ರ್ಯಾಂಡ್‌ ಬೆಂಗಳೂರು ಸಮಿತಿಯ ಸದಸ್ಯರಾದ ವಿ. ರವಿಚಂದರ್ ಮಾತನಾಡಿ, ‘ಜಿಬಿಜಿ ಕಾಯ್ದೆಯು ಭಾರತದಲ್ಲಿ ಮೆಗಾಸಿಟಿಗಳಿಗೆ ಒಂದು ದಿಟ್ಟ ಪ್ರಯೋಗವಾಗಿದೆ. ಈ ಕಾಯ್ದೆಯನ್ನು ಹೇಗೆ ಅನುಷ್ಠಾನ ಮಾಡಲಾಗುತ್ತದೆ ಹಾಗೂ ನಾಗರಿಕರು ಈ ಕಾನೂನಿನ ನಿಯಮವನ್ನು ಹೇಗೆ ಪಾಲಿಸುತ್ತಾರೆ ಎಂಬುದರ ಮೇಲೆ ಇದರ ಯಶಸ್ಸು ಅವಲಂಬಿತವಾಗಿದೆ’ ಎಂದರು. 

ಜನಾಗ್ರಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ವಿಶ್ವನಾಥನ್ ಸಂವಾದವನ್ನು ನಿರ್ವಹಿಸಿದರು. ಜನಾಗ್ರಹ ಮತ್ತು ಜನ ಅರ್ಬನ್ ಸ್ಪೇಸ್ ಫೌಂಡೇಷನ್‌ನ ಪಾಲಿಸಿ ವಿಭಾಗದ ಸಹಾಯಕ ನಿರ್ದೇಶಕರಾದ ವಿ.ಆರ್. ವಚನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.