ಶಿವಾಜಿನಗರದಲ್ಲಿರುವ ಎಚ್.ಎಸ್.ಐ.ಎಸ್. ಘೋಷಾ ಸರ್ಕಾರಿ ಆಸ್ಪತ್ರೆ
ಬೆಂಗಳೂರು: ಇಲ್ಲಿನ ಸರ್ಕಾರಿ ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರ ಜತೆಗೆ ಶುಶ್ರೂಷಾಧಿಕಾರಿಯೊಬ್ಬರು ಶಾಮೀಲಾಗಿ ವೈದ್ಯಕೀಯ ಉಪಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿರುವುದು, ಅಲ್ಲಿನ ರೋಗಿಗಳಿಂದ ಯುಪಿಐ ಆಧಾರಿತ ಆ್ಯಪ್‌ಗಳ ಮೂಲಕ ಹಣ ವರ್ಗಾವಣೆ ನಡೆಸಿರುವುದು ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸಿದ ತನಿಖೆಯಿಂದ ದೃಢಪಟ್ಟಿದೆ.
ಈ ಆಸ್ಪತ್ರೆಯು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ. ಇದು ತಾಯಿ–ಮಕ್ಕಳ ಆಸ್ಪತ್ರೆಯಾಗಿದ್ದು, ಪ್ರತಿನಿತ್ಯ ನೂರಾರು ತಾಯಂದಿರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಹೆರಿಗೆಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ದೀಪಿಕಾ ಅವರ ವಿರುದ್ಧ ಆಸ್ಪತ್ರೆ ಸಿಬ್ಬಂದಿ ಈ ಹಿಂದೆ ಇಲಾಖೆಗೆ ಲಿಖಿತ ದೂರು ನೀಡಿದ್ದರು. ಇಲಾಖೆ ರಚಿಸಿದ್ದ ಸಮಿತಿ ಕೈಗೊಂಡ ತನಿಖೆಯಲ್ಲಿ ಹಣಕಾಸಿನ ಅವ್ಯವಹಾರ ಸೇರಿ ವಿವಿಧ ಆರೋಪಗಳು ದೃಢಪಟ್ಟಿದ್ದು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಅವರು ಇದೇ 26ರಂದು ಡಾ. ದೀಪಿಕಾ ಅವರನ್ನು ಅಮಾನತು ಮಾಡಿದ್ದಾರೆ.
ತಾಯಂದಿರ ಆರೋಗ್ಯಕ್ಕೆ ಸಂಬಂಧಿ ಸಿದ ಮಾರ್ಗಸೂಚಿಗಳನ್ನು ಅನುಷ್ಠಾನ ಮಾಡದಿರುವುದು, ಸಿಸೇರಿಯನ್ ಬಗ್ಗೆ ‘ಆಡಿಟ್’ ನಡೆಸದಿರುವುದು, ಅಕ್ರಮವಾಗಿ ಗರ್ಭಪಾತ ನಡೆಸುವಿಕೆ, ಗರ್ಭಾಶಯದ ಅನಗತ್ಯ ಶಸ್ತ್ರಚಿಕಿತ್ಸೆ, ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ, ಸಹ ಪ್ರಸೂತಿ ತಜ್ಞರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಿರುಕುಳದ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಗಸ್ಟ್ 8ರಂದು ತನಿಖಾ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಇದೇ 18ರಂದು ವರದಿ ನೀಡಿದೆ. ಈ ವರದಿ ಆಧಾರದ ಮೇಲೆ ಇಲಾಖೆ ಕ್ರಮ ಕೈಗೊಂಡಿದೆ.
ಶುಶ್ರೂಷಾಧಿಕಾರಿ ಭಾಗಿ: ಡಾ.ದೀಪಿಕಾ ಅವರೊಂದಿಗೆ ಆಸ್ಪತ್ರೆಯ ಶುಶ್ರೂಷಾಧಿಕಾರಿ ಸುಮಲತಾ ಅವರು ಶಾಮೀಲಾಗಿರುವ ಬಗ್ಗೆ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವರು ಗುತ್ತಿಗೆ ಆಧಾರದಲ್ಲಿ ನೇಮಕ ಗೊಂಡಿದ್ದಾರೆ. ರೋಗಿಗಳಿಂದ ಹಣ ಪಡೆದು, ಫೋನ್ ಪೇ, ಗೂಗಲ್ ಪೇ ಮೂಲಕ ದೀಪಿಕಾ ಅವರಿಗೆ ಹಣ ವರ್ಗಾವಣೆ ನಡೆಸಿದ್ದರು ಎನ್ನುವುದು ದೃಢಪಟ್ಟಿದೆ ಎಂದು ತನಿಖಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅನನುಭವಿಗಳು, ಹೆರಿಗೆ ಪ್ರಕರಣಗಳನ್ನು ನಿರ್ವಹಣೆ ಮಾಡಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಪ್ರಿಯಾಂಕಾ ಅವರು, ಈ ಹಿಂದೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಡಾ. ದೀಪಿಕಾ ಅವರ ವಿದ್ಯಾರ್ಥಿಯಾಗಿದ್ದರು. ಅವರು ಪ್ರಸೂತಿ ಚಿಕಿತ್ಸೆಯ ಮಾರ್ಗಸೂಚಿ ಮತ್ತು ಇತರೆ ಶಿಷ್ಠಾಚಾರಗಳ ಬಗ್ಗೆ ಪರಿಜ್ಞಾನವಿಲ್ಲದವರಾಗಿರುತ್ತಾರೆ ಎಂದು ತಿಳಿಸಲಾಗಿದೆ.
ಬಾಣಂತಿ ಸಾವಿಗೆ ಕಾರಣ?
ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸ್ಥಾನಿಕ ವೈದ್ಯಾಧಿಕಾರಿ ಡಾ. ರಮ್ಯಾ ಅವರು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದದಲ್ಲಿ ಅಷ್ಟಾಗಿ ಅನುಭವ ಹೊಂದಿಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರಸೂತಿಗೆ ಸಂಬಂಧಿಸಿದ ಮಾರ್ಗಸೂಚಿ ಪಾಲಿಸದಿರುವುದು ಕಂಡುಬಂದಿದ್ದು, ಅವರು 29 ವರ್ಷದ ರೋಗಿಗೆ ಗರ್ಭಾಶಯ ತೆಗೆದು ಹಾಕಿರುವ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ. ಆಗಸ್ಟ್ 20ರಂದು ವರದಿಯಾದ ಬಾಣಂತಿಯ ಸಾವಿಗೆ ಕಾರಣವಾಗಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಿಂಗಳಿಗೆ 400 ಹೆರಿಗೆ
ಶಿವಾಜಿನಗರದಲ್ಲಿರುವ ಈ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 350ರಿಂದ 400 ಹೆರಿಗೆಗಳು ನಡೆಯುತ್ತವೆ. ಇಲ್ಲಿಗೆ ಬರುವವರು ಬಹುತೇಕರು ಬಡ–ಮಧ್ಯಮ ವರ್ಗದವರಾಗಿದ್ದಾರೆ. ಆಸ್ಪತ್ರೆಯ ಒಟ್ಟು ಹಾಸಿಗೆಗಳಲ್ಲಿ 80 ಹಾಸಿಗೆಗಳನ್ನು ತಾಯಂದಿರ ಚಿಕಿತ್ಸೆಗೆ ಮೀಸಲಿಡಲಾಗಿದೆ.
120 ಘೋಷಾ ಆಸ್ಪತ್ರೆ ಹೊಂದಿರುವ ಹಾಸಿಗೆಗಳು
150–200
ಹೊರರೋಗಿ ವಿಭಾಗಕ್ಕೆ ಪ್ರತಿನಿತ್ಯ ಭೇಟಿ ನೀಡುವವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.