ADVERTISEMENT

ಜ್ಞಾನಾಕ್ಷಿ ಶಾಲೆ: ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕು; ನಾಗಲಕ್ಷ್ಮಿ ಚೌಧರಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 16:14 IST
Last Updated 23 ಡಿಸೆಂಬರ್ 2025, 16:14 IST
   

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯು ರಜತ ಮಹೋತ್ಸವವನ್ನು ಭಾನುವಾರ ಅದ್ದೂರಿಯಾಗಿ ಆಚರಿಸಿತು.

ತಿರುಚಿ ಸ್ವಾಮೀಜಿಯವರ ಪರಮಾನು ಗ್ರಹದಿಂದ ಪ್ರಾರಂಭವಾದ ಈ ಶಾಲೆಯು ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಮೌಲ್ಯಧಾರಿತ ಶಿಕ್ಷಣವನ್ನು ಯಾವುದೇ ರೀತಿಯ ಭೇದಭಾವವಿಲ್ಲದೆ ಸರ್ವರಿಗೂ ಶಿಕ್ಷಣ ಎಂಬ ಧ್ಯೇಯದೊಂದಿಗೆ ನೀಡುತ್ತ ಬಂದಿದೆ ಎಂದು  ಸಮಾರಂಭದಲ್ಲಿದ್ದ ಗಣ್ಯರು ಸಂವಾದ ಕಾರ್ಯಕ್ರಮದ ಮೂಲಕ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಯವರು ಮಾತನಾಡಿ, ‘ಮಕ್ಕಳು ತಾವು ಅಂದುಕೊಂಡಿದ್ದನ್ನು ಸಾಧಿಸಲು ಶ್ರದ್ಧೆ ಮತ್ತು ಶ್ರಮ ವಹಿಸಬೇಕು. ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕು ಇಲ್ಲದಿದ್ದರೂ ರಾಜಕೀಯವನ್ನು ಚೆನ್ನಾಗಿ ಅರಿಯಬೇಕು’ ಎಂದು ಹೇಳಿದರು.

ADVERTISEMENT

ಲೇಖಕ ಶಾಂತನು ಗುಪ್ತ ಅವರು ಮಾತನಾಡಿ ‘ನಮ್ಮ ಜೀವನದಲ್ಲಿ ಏನಾದರೂ ಕಷ್ಟಗಳು ಬಂದಾಗ ಶ್ರೀರಾಮನ ಜೀವನವನ್ನು ನೆನಪಿಸಿಕೊಳ್ಳಿ ಕಷ್ಟಗಳನ್ನು ಸಹಿಸುವ ಶಕ್ತಿ ಬರುತ್ತದೆ’ ಎಂದರು.

ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ತಮ್ಮ ಆತ್ಮ ಬಲವನ್ನು ಹೆಚ್ಚಿಸಿಕೊಳ್ಳುವ ಮುನ್ನ ದೈಹಿಕ ಬಲ ಹಾಗೂ ಭಾವನಾತ್ಮಕ ಬಲವನ್ನು ಹೆಚ್ಚಿಸಿಕೊಳ್ಳಬೇಕು’ ಎಂದರು.

ಹರಿಹರಪುರ ಸ್ವಾಮೀಜಿ ‘ತಂತ್ರಜ್ಞಾನವು ನಮ್ಮ ಲೌಕಿಕ ಸವಲತ್ತುಗಳಿಗೆ ಅನುಕೂಲ ಮಾಡಿಕೊಡಬಹುದೇ ಹೊರತು ಆತ್ಮ ಶಕ್ತಿ ಜಾಗೃತಿಗಲ್ಲ. ಆದ್ದರಿಂದ ನಮ್ಮ ಆಚಾರ ವಿಚಾರಗಳ ಬಗ್ಗೆ ಎಂದೂ ಉದಾಸೀನ ಮಾಡಬೇಡಿ’ ಎಂದರು.

ಜಯೇಂದ್ರ ಪುರಿ ಸ್ವಾಮೀಜಿಯವರು ಮಾತನಾಡಿ, ‘ನಾವು ಕಲಿಯುವ ವಿದ್ಯೆ ಸಮಾಜದ ಒಳಿತಿಗಾಗಿ ಇರಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪ್ರತಿದಿನ ಒಂದು ಗಂಟೆಯನ್ನು ಮೀಸಲಿಡಬೇಕು’ ಎಂದು ಜಾಗೃತಿ ಮೂಡಿಸಿದರು.

ಶಾಲೆಯ ಗೌರವ ಕಾರ್ಯದರ್ಶಿ ಹಯಗ್ರೀವ ಆಚಾರ್ಯ ಅವರಿಗೆ ಎಲ್ಲಾ ಗುರು ಹಿರಿಯರ ಸಮ್ಮುಖದಲ್ಲಿ ಸರ್ವಸಂತ ಪ್ರಿಯ ಸೇವಾ ಸೇನಾಧಿಪತಿ ಎಂಬ ಬಿರುದನ್ನು ನೀಡಿ ಗೌರವಿಸಿದರು.

ಸುಮಾರು 7000ಕ್ಕೂ ಹೆಚ್ಚು ಪೋಷಕರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸೃಷ್ಟಿಯ ಮೂಲದಿಂದ ಆಧುನಿಕ ಭಾರತದವರೆಗೆ ಸನಾತನ ಕಥೆಗಳನ್ನು ಒಳಗೊಂಡ ಆದಿ ಅನಂತ ಮಾಯೆ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.