
ಬೆಂಗಳೂರು: ರೈತರು ಬೆಳೆದ ಕಲ್ಲಂಗಡಿ, ಹಲಸು, ಸಪೋಟ, ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರುವ ಮಿಲ್ಕಿ ಅಣಬೆ ಹಾಗೂ ನಾಟಿಕೋಳಿ ಮೊಟ್ಟೆಗಳು ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳು ರೈತ ಸಂತೆಯಲ್ಲಿ ಸಾರ್ವಜನಿಕರನ್ನು ಸೆಳೆದವು.
ಜಿಕೆವಿಕೆ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ ವರ್ಷದ ಮೊದಲ ರೈತ ಸಂತೆಯಲ್ಲಿ ಹೂವು, ಹಣ್ಣು, ತೆಂಗಿನಕಾಯಿ, ತರಕಾರಿಗಳ ಮಾರಾಟ ಜೋರಾಗಿತ್ತು. ಬಿಳಿಬಣ್ಣ ದಪ್ಪಕಾಂಡ ಮತ್ತು ರುಚಿಕರವಾದ ತಾಜಾ ಮಿಲ್ಕಿ ಅಣಬೆಗಳು ರಾಸಾಯನಿಕ ಮುಕ್ತವಾಗಿದ್ದು, ರೈತರು ಸ್ವಯಂ ಬೆಳೆಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರು. ಇದರಿಂದ ರೈತರಿಗೆ ಉತ್ತಮ ಆದಾಯ ದೊರೆಯುವುದರ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ಅಣಬೆಗಳು ದೊರೆತವು.
‘ಸ್ವಚ್ಛ ಪರಿಸರದಲ್ಲಿ ರಾಸಾಯನಿಕ ಹಾಗೂ ಕೃತಕ ಆಹಾರವಿಲ್ಲದೇ ಬೆಳೆಸಿದ ದೇಶಿ ಕೋಳಿಗಳ ನಾಟಿ ಮೊಟ್ಟೆಗಳಿಗೆ ಹೆಚ್ಚು ಬೇಡಿಕೆ ಇತ್ತು. ಈ ಮೊಟ್ಟೆಗಳು ಪ್ರೋಟೀನ್, ವಿಟಮಿನ್‌ಗಳ ಜೊತೆಗೆ ಖನಿಜಾಂಶಗಳಿಂದ ಸಮೃದ್ಧವಾಗಿದ್ದು, ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿವೆ’ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಬಿತ್ತನೆ ಬೀಜಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ವಿವಿಧ ಸಸ್ಯಾಭಿವೃದ್ಧಿ ಸಾಮಗ್ರಿಗಳು, ಪ್ರಮುಖವಾಗಿ ತೋಟಗಾರಿಕಾ ಬೆಳೆಗಳಾದ ಹಣ್ಣುಗಳಾದ ಮಾವು, ನೇರಳೆ, ಹಲಸು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಗೊಬ್ಬರಗಳು ಕೃಷಿ ಯಂತ್ರೋಪಕರಣಗಳು ಖರೀದಿಗೆ ಅವಕಾಶ ನೀಡಲಾಗಿತ್ತು. ಮಕ್ಕಳು ಎತ್ತಿನ ಬಂಡಿಯ ಸವಾರಿ ಮಾಡಿದರು. ಸಂತೆಯ ಅಂಗಳದಲ್ಲಿ ವಿವಿಧ ಜಾನುವಾರುಗಳು ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.