ADVERTISEMENT

ಜಿಕೆವಿಕೆಗೂ ಕೆ.ಆರ್‌. ಮಾರ್ಕೆಟ್‌ಗೂ ಸಂಬಂಧ‌ವಿಲ್ಲ: ಸ್ಪಷ್ಟನೆ

ಹೂವಿನ ಮಾರುಕಟ್ಟೆಯ ಬಗ್ಗೆ ಸೌತ್ ಇಂಡಿಯಾ ಫ್ಲವರ್ ಅಸೋಸಿಯೇಷನ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 16:08 IST
Last Updated 4 ಸೆಪ್ಟೆಂಬರ್ 2025, 16:08 IST
<div class="paragraphs"><p>ಹೂವಿನ ಮಾರುಕಟ್ಟೆ</p></div>

ಹೂವಿನ ಮಾರುಕಟ್ಟೆ

   

ಬೆಂಗಳೂರು: ಜಿಕೆವಿಕೆಯಲ್ಲಿ ನಿರ್ಮಾಣವಾಗಲಿರುವ ಹೂವು ಮಾರುಕಟ್ಟೆಗೂ ಕೆ.ಆರ್. ಮಾರ್ಕೆಟ್ ಹೂವು ಮಾರುಕಟ್ಟೆ ಸ್ಥಳಾಂತರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸೌತ್ ಇಂಡಿಯಾ ಫ್ಲವರ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎಂ. ಅರವಿಂದ್ ಸ್ಪಷ್ಟಪಡಿಸಿದರು.

ಜಿಕೆವಿಕೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮಾರುಕಟ್ಟೆ ದೇಶದ ಹಾಗೂ ವಿಶ್ವದ ಇತರೆ ಭಾಗಗಳಿಗೆ ಕಳುಹಿಸುವ ಕಟ್ ಫ್ಲವರ್ ಮಾರುಕಟ್ಟೆಯಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ನಗರದ ಜಿಕೆವಿಕೆಯಲ್ಲಿ 5 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು, ಇಲ್ಲಿ 900 ಮರಗಳನ್ನು ಹನನ ಮಾಡುತ್ತಿರುವುದಾಗಿ ಸುಳ್ಳು ಸುದ್ದಿಗಳನ್ನು ಹರಡಲಾಗಿದೆ. ಮರಗಳನ್ನು ಉಳಿಸಿಕೊಂಡೇ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಮರಗಳನ್ನು ಕಡಿಯುತ್ತಿಲ್ಲ. ಸಣ್ಣ ಗಿಡಗಳಿದ್ದರೆ ಅವುಗಳನ್ನು ಸ್ಥಳಾಂತರ ಮಾಡಲಾಗುವುದು. ಪರಿಸರಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗುತ್ತಿಲ್ಲ ಎಂದು ಹೇಳಿದರು.

ಲಕ್ಷಾಂತರ ಹೂವು ಬೆಳೆಗಾರರ ಹಿತ ದೃಷ್ಟಿಯಿಂದ ಹೂವಿನ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ರೈತರ ಬಹಳ ದಿನಗಳ ಕನಸು ಇದೀಗ ನನಸಾಗುತ್ತಿದೆ. ಬೆಂಗಳೂರು ಸುತ್ತಮುತ್ತ ಶಾಶ್ವತ ಮಾರುಕಟ್ಟೆ ಇಲ್ಲ. ಬೆಂಗಳೂರು, ದೊಡ್ಡಬಳ್ಳಾಪುರ, ಆನೇಕಲ್, ಹೊಸಕೋಟೆ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಕೋಲಾರ ಭಾಗದಲ್ಲಿ ರೈತರು ಬೆಳೆದ ಹೂವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ರೈಲ್ವೆ, ವಾಯುಮಾರ್ಗ, ರಸ್ತೆ ಸಾರಿಗೆ ಎಲ್ಲದಕ್ಕೂ ಜಿಕೆವಿಕೆ ಪ್ರಶಸ್ತ ಸ್ಥಳ ಎಂದರು.

‘ಅಂತರರಾಷ್ಟ್ರೀಯ ಪುಷ್ಪ ಮಾರುಕಟ್ಟೆ ಮಾದರಿಯಲ್ಲಿ ರಾಜ್ಯ ಸರ್ಕಾರ, ತೋಟಗಾರಿಕೆ ಇಲಾಖೆ, ಕೃಷಿ ವಿವಿ, ಎಪಿಎಂಸಿ ಸಹಯೋಗದಲ್ಲಿ ಪುಷ್ಪ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಹೀಗಾಗಿಯೇ ಸೌತ್ ಇಂಡಿಯಾ ಫ್ಲವರ್ ಅಸೋಸಿಯೇಷನ್, ಎಕ್ಸಾಟಿಕ್ ಫ್ಲವರ್ ಅಸೋಸಿಯೇಷನ್, ಸ್ಮಾಲ್ ಗ್ರೋವರ್ಸ್ ಅಸೋಸಿಯೇಷನ್, ಟ್ರೇಡರ್ ಅಸೋಸಿಯೇಷನ್ ಮನವಿ ಮೇರೆಗೆ ಜಿ.ಕೆ.ವಿ.ಕೆ. ಯಲ್ಲಿ ಐದು ಎಕರೆ ಭೂಮಿಯನ್ನು ತೋಟಗಾರಿಕೆಗೆ ಮಂಜೂರು ಮಾಡಿದ್ದು, ಇನ್ನೂ ಐದು ಎಕರೆ ನೀಡುವಂತೆ ಮನವಿ ಮಾಡಿದ್ದೇವೆ. ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ವಾಸ್ತವ ತಿಳಿಯದೇ ಕೆಲವರು ಸರ್ಕಾರ ಮತ್ತು ಜನ ಸಾಮಾನ್ಯರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ದೂರಿದರು.

ಬಿಡಿ ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ದಿವಾಕರ್ ಮಾತನಾಡಿ, ‘ಕೆ.ಆರ್. ಮಾರ್ಕೆಟ್‌ನಲ್ಲಿ ಮಲ್ಲಿಗೆ, ಸೇವಂತಿಗೆ ಸೇರಿದಂತೆ ಬಿಡಿ ಹೂವು ಮಾರಾಟಗಾರರು ಇರುವುದು. ಜಿಕೆವಿಕೆಯಲ್ಲಿ ಕಟ್ ಪ್ಲವರ್ ಮಾರಾಟ ಮಾಡುವುದಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸೌತ್ ಇಂಡಿಯಾ ಫ್ಲವರ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಜಿ. ರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.