ADVERTISEMENT

ಬೆಂಗಳೂರು | ‘ಸಸ್ಯ ಸಂತೆ’ಗೆ ಚಾಲನೆ

ಜಿಕೆವಿಕೆ ಆವರಣ: ಹೂವು, ಹಣ್ಣಿನ ಗಿಡಗಳು, ಕೈತೋಟ ಪರಿಕರ ಮಾರಾಟ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 23:20 IST
Last Updated 13 ಜುಲೈ 2025, 23:20 IST
‘ಸಸ್ಯ ಸಂತೆ’ಯಲ್ಲಿ ಹೂವು, ಹಣ್ಣಿನ ಗಿಡಗಳನ್ನು ಖರೀದಿಸುತ್ತಿರುವುದು
‘ಸಸ್ಯ ಸಂತೆ’ಯಲ್ಲಿ ಹೂವು, ಹಣ್ಣಿನ ಗಿಡಗಳನ್ನು ಖರೀದಿಸುತ್ತಿರುವುದು   

ಯಲಹಂಕ: ನಗರೀಕರಣದ ಭರಾಟೆಯಲ್ಲಿ ಜನರು ಕೃಷಿಯನ್ನು ಮರೆಯುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಇದೊಂದು ಅಪಾಯಕಾರಿ ಬೆಳವಣಿಗೆಯಾಗಬಹುದು’ ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಕಳವಳ ವ್ಯಕ್ತಪಡಿಸಿದರು.

ಜಿಕೆವಿಕೆ ಆವರಣದಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ(ಬಾಗಲಕೋಟೆ). ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿರುವ ಪರಿಸರ ದಿನಾಚರಣೆ ಮತ್ತು ಸಸ್ಯಸಂತೆ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಪ್ರದಾಯಿಕ ಪದ್ಧತಿಗಳ ಜೊತೆಗೆ ವಿಜ್ಞಾನಿಗಳು ಸಂಶೋಧಿಸಿದ ನವೀನ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ದೇಶದ 150 ಕೋಟಿ ಜನಸಂಖ್ಯೆಗೂ ಪೌಷ್ಠಿಕ ಆಹಾರ ಒದಗಿಸಬಹುದು. ನಗರವಾಸಿಗಳು ತಮ್ಮ ಮನೆಯ ಮುಂಭಾಗ ಮತ್ತು ಚಾವಣಿಯಲ್ಲಿ  ಹಣ್ಣು ಹಾಗೂ ತರಕಾರಿ ಗಿಡಗಳನ್ನು ಬೆಳೆಸುವುದರಿಂದ ತಮ್ಮ ಕುಟುಂಬಕ್ಕೆ ಬೇಕಾದ ಆಹಾರ ಪದಾರ್ಥಗಳು ಮನೆಯಲ್ಲಿಯೇ ದೊರೆಯಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಸ್‌.ಬಿ.ದಂಡಿನ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಜಿ.ಎಸ್‌.ಕೆ.ಸ್ವಾಮಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ರಾಜಾಸಾಬ್‌.ಎ.ಎಚ್‌, ರೈತ ಉತ್ಪಾದಕರ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನಿರ್ದೇಶಕ ಜಿ.ಕೆ.ಸೀತಾರಾಮು, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಎಸ್‌.ಎಲ್‌.ಜಗದೀಶ್‌, ಬಿಗ್‌ಬಾಸ್‌ ಕಿರುತೆರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಶಶಿಕುಮಾರ್‌ ಉಪಸ್ಥಿತರಿದ್ದರು.

‘ಸಸ್ಯಸಂತೆ‘ಯ ಆಕರ್ಷಣೆ..

* ವಿವಿಧ ಹಣ್ಣಿನ ಗಿಡಗಳು ಹೂವು ಮತ್ತು ಅಲಂಕಾರಿಕ ಸಸ್ಯಗಳು ಪ್ಲಾಂಟೇಶನ್‌ ಔಷಧೀಯ ಮತ್ತು ಸುಗಂಧಿ ಸಸಿಗಳು ವಿವಿಧ ರೀತಿಯ ಹಣ್ಣು ಮತ್ತು ತರಕಾರಿ ಸಸಿಗಳಿವೆ. ಬೀಜಗಳು ಹಲಸು ಮತ್ತು ಮಾವಿನ ಹಣ್ಣುಗಳ ಮಾರಾಟ ಕೃಷಿ ಮತ್ತು ಕೈತೋಟದ ಪರಿಕರಗಳಿವೆ.

* ಎರೆಗೊಬ್ಬರ ಹೂಕುಂಡಗಳು ಮಣ್ಣು ಮಿಶ್ರಣ ಜೈವಿಕ ಪೀಡೆ ನಾಶಕಗಳು ಸಾವಯವ ಗೊಬ್ಬರಗಳು ಸಿರಿಧಾನ್ಯಗಳು ಬಟ್ಟೆ ತಿಂಡಿ-ತಿನಿಸುಗಳು ವಿಭಿನ್ನ ತಳಿಯ ಆಡು ಕುರಿಗಳ ಪ್ರದರ್ಶನವಿದೆ.

* ಎತ್ತಿನ ಗಾಡಿ ಸವಾರಿ ವಿವಿಧ ತಳಿಯ ಹಲಸಿನ ಸಸಿಗಳ ಮಳಿಗೆ ತಾರಸಿ ತೋಟದ ಸಸಿಗಳು ಮೌಲ್ಯವರ್ಧಿತ ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ. ವಿದ್ಯಾರ್ಥಿಗಳಿಗೆ ತೋಟಗಾರಿಕೆ ವಿಶೇಷ ಮಾಹಿತಿ ವಲಯ ವಿವಿಧ ಬೆಳೆ ಪ್ರಾತ್ಯಕ್ಷಿಕೆ ಸೇರಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.