ADVERTISEMENT

ಬೀದಿನಾಯಿಗಳ ದಾಳಿ; ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:19 IST
Last Updated 1 ಸೆಪ್ಟೆಂಬರ್ 2018, 19:19 IST
ಪ್ರವೀಣ್
ಪ್ರವೀಣ್   

ಬೆಂಗಳೂರು: ಬೀದಿ ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ 11 ವರ್ಷದ ಬಾಲಕ ಪ್ರವೀಣ್, ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ್ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ.

‘ಮಧ್ಯಾಹ್ನ ಬಾಲಕನ ಆರೋಗ್ಯ ತಪಾಸಣೆ ನಡೆಸಿದ್ದ ವೈದ್ಯರು, ‘ಮಿದುಳು ನಿಷ್ಕ್ರಿಯಗೊಂಡಿದ್ದು, ಯಾವುದೇ ಅಂಗಾಂಗಗಳು ಕೆಲಸ ಮಾಡುತ್ತಿಲ್ಲ. ಆಮ್ಲಜನಕದ ನೆರವಿನಿಂದ ಆತ ಬದುಕಿದ್ದಾನೆ ಎಂದು ಹೇಳಿದ್ದರು. ಅದಾದ ನಂತರ, ರಾತ್ರಿ ವೇಳೆ ಆತ ಮೃತಪಟ್ಟಿರುವುದಾಗಿ ತಿಳಿಸಿದರು’ ಎಂದು ಬಾಲಕನ ದೊಡ್ಡಮ್ಮ ಹೇಳಿದರು.

‘ದಾಳಿಯಿಂದಾಗಿ ಬಾಲಕನಿಗೆ ತೀವ್ರ ಗಾಯಗಳಾಗಿದ್ದವು. ಬಹು ಅಂಗಾಂಗ ವೈಫಲ್ಯವೂ ಕಾಣಿಸಿಕೊಂಡಿತ್ತು. ನಾವು ಎಷ್ಟೇ ಚಿಕಿತ್ಸೆ ನೀಡಿದರೂ ಆತ ಉಳಿಯಲಿಲ್ಲ. ರಾತ್ರಿ 8.30 ಗಂಟೆ ಸುಮಾರಿಗೆ ತೀರಿಕೊಂಡ’ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಅನೂಪ್ ಅಮರನಾಥ್ ತಿಳಿಸಿದರು.

ADVERTISEMENT

ಬುಧವಾರ ಎಚ್‌ಎಎಲ್‌ ಸಮೀಪದ ವಿಭೂತಿಪುರ ಬಳಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕನ ಮೇಲೆ ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ಮಾಡಿದ್ದವು. ಆತನ ಗಂಟಲಿಗೇ ಬಾಯಿ ಹಾಕಿದ್ದ ನಾಯಿಗಳು ಗಂಭೀರವಾಗಿ ಗಾಯಗೊಳಿಸಿದ್ದವು. ಆ ಬಳಿಕ ಬಾಲಕನನ್ನು ಮಣಿಪಾಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

‘ಮಗನ ಚಿಕಿತ್ಸೆಗೆ ನೆರವು ಸಿಕ್ಕಿತ್ತು. ಆದರೆ, ಆತ ಬದುಕಲಿಲ್ಲ. ಬೇರೆ ಮಕ್ಕಳಿಗೆ ಈ ಸ್ಥಿತಿ ಬರಬಾರದು. ಇದಕ್ಕಾಗಿ ಬೀದಿನಾಯಿಗಳಿಗೆ ಕಡಿವಾಣ ಹಾಕಬೇಕು’ ಎಂದು ಬಾಲಕನ ತಾಯಿ ಕಣ್ಣೀರಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.