ADVERTISEMENT

ವ್ಯಾಪಾರಿಗೆ ವಂಚನೆ | ತಂದೆ, ಮಗನ ಬಂಧನ: ₹1.60 ಕೋಟಿ ಮೌಲ್ಯದ ಚಿನ್ನದ ಗಟ್ಟಿ ವಶ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 15:54 IST
Last Updated 11 ನವೆಂಬರ್ 2025, 15:54 IST
<div class="paragraphs"><p>ರಾಜೇಂದ್ರ ಕುಮಾರ್ ಮತ್ತು&nbsp;ಜೀವನ್ ಸಕಾರಿಯಾ</p></div>

ರಾಜೇಂದ್ರ ಕುಮಾರ್ ಮತ್ತು ಜೀವನ್ ಸಕಾರಿಯಾ

   

ಬೆಂಗಳೂರು: ಚಿನ್ನಾಭರಣ ವ್ಯಾಪಾರಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ, ಸುಮಾರು ₹1.60 ಕೋಟಿ ಮೌಲ್ಯದ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ.

ಶೇಷಾದ್ರಿಪುರದ ಬಳಿಯ ನೆಹರೂ ನಗರ ನಿವಾಸಿಗಳಾದ ರಾಜೇಂದ್ರ ಕುಮಾರ್ (63) ಮತ್ತು ಅವರ ಮಗ ಜೀವನ್ ಸಕಾರಿಯಾ (33) ಬಂಧಿತರು. ಆರೋಪಿಗಳು ಚಿನ್ನಾಭರಣ ವ್ಯಾಪಾರಿ ಹರ್ಷಿತ್ ಎಂಬುವರಿಂದ ಹಂತ ಹಂತವಾಗಿ ಚಿನ್ನದ ಆಭರಣಗಳನ್ನು ಪಡೆದು ಮಾರಾಟ ಮಾಡಿಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ನಗರ್ತಪೇಟೆಯಲ್ಲಿ ಚಿನ್ನಾಭರಣ ಮಳಿಗೆ ಇಟ್ಟುಕೊಂಡಿರುವ ಹರ್ಷಿತ್‍ ಅವರಿಗೆ ಆರೋಪಿಗಳು ಹಲವು ವರ್ಷಗಳಿಂದ ಪರಿಚಿತರಾಗಿದ್ದರು. ಹೀಗಾಗಿ, ಹರ್ಷಿತ್ ಯಾವುದೇ ದಾಖಲೆ ಪತ್ರಗಳಿಲ್ಲದೆ ಆರೋಪಿಗಳಿಗೆ ಆಭರಣಗಳನ್ನು ಕೊಟ್ಟಿದ್ದರು. ಚಿನ್ನದ ದರ ದುಬಾರಿಯಾದ ಕಾರಣಕ್ಕೆ ನಂತರ ಆರೋಪಿಗಳು ಹಣ ಕೊಡದೆ ಹಾಗೂ ಆಭರಣಗಳನ್ನೂ ಹಿಂದಿರುಗಿಸದೆ ಮೋಸ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಹರ್ಷಿತ್‍ ಅವರಿಂದ ಪಡೆದಿದ್ದ ಆಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿ ಮಾಡಿದ್ದರು. ನೆಹರೂ ನಗರದ ಮನೆಯಲ್ಲಿ ಬಚ್ಚಿಟ್ಟಿದ್ದ 1 ಕೆ.ಜಿ. 300 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಇದೇ ರೀತಿ ಹಲವರಿಗೆ ವಂಚಿಸಿರುವುದು ವಿಚಾರಣೆಯಲ್ಲಿ ಗೊತ್ತಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ವಂಚನೆಗೆ ಒಳಗಾದವರು ಈ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.