ADVERTISEMENT

ಬೆಂಗಳೂರು: ಕಾಡಿನಲ್ಲಿ ಬಂಡೆ ಕೆಳಗೆ ಬಚ್ಚಿಟ್ಟಿದ್ದ ಚಿನ್ನ ವಶ

ಆರೋಪಿಗಳಿಂದ ₹1.86 ಕೋಟಿ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 0:45 IST
Last Updated 17 ಆಗಸ್ಟ್ 2024, 0:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದ ವಿವಿಧೆಡೆ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದ ಎಂಟು ಆರೋಪಿಗಳ್ನು ಬಂಧಿಸಿ, ₹1.86 ಕೋಟಿ ಮೌಲ್ಯದ 1 ಕೆ.ಜಿ. 455 ಗ್ರಾಂ. ತೂಕದ ಆಭರಣ
ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ಕೊಲೆ, ದರೋಡೆ, ಮನೆ ಕಳ್ಳತನ, ಹಾಗೂ ಅಪಹರಣ ಪ್ರಕರಣಗಳು ದಾಖಲಾಗಿವೆ. ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ADVERTISEMENT

81 ಲಕ್ಷ ಮೌಲ್ಯದ ಆಭರಣ: ಮೇ 11ರಂದು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ ನಿವಾಸಿಯೊಬ್ಬರು ಕಣ್ಣಿನ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ತೆರಳಿದ್ದರು. ಆ ಸಂದರ್ಭದಲ್ಲಿ ಮನೆಯ ಬೀಗ ಒಡೆದು ಚಿನ್ನಾಭರಣ ಕಳವು ಮಾಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಕಳ್ಳತನ ಮಾಡಿದ ಆಭರಣಗ ಳೊಂದಿಗೆ ಕಾಡಿಗೆ ಪರಾರಿಯಾಗಿದ್ದ ನೆಲಮಂಗಲದ ಸೋಲೂರು ನಿವಾಸಿ ನರಸಿಂಹ ರೆಡ್ಡಿ ಹಾಗೂ ವಿನು ಚಕ್ರವರ್ತಿ ಎಂಬುವವರನ್ನು ಬಂಧಿಸಿದ್ದಾರೆ. ‌ನರಸಿಂಹರೆಡ್ಡಿ ವಿರುದ್ಧ 49 ಹಾಗೂ ವಿನು ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಅರಣ್ಯ ಪ್ರದೇಶದಲ್ಲಿ ನರಸಿಂಹರೆಡ್ಡಿ ಬಚ್ಚಿಟ್ಟುಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಟಿ ಮನೆಗಳು, ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಯಾರೂ ಇಲ್ಲದ ವೇಳೆ ಮನೆಗಳ ಬೀಗ ಒಡೆದು ಕಳ್ಳತನ ಮಾಡಿ, ಅದೇ ಹಣದಲ್ಲಿ ಕಾರು ಖರೀದಿ ಮಾಡಿದ್ದ. ಇಬ್ಬರೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ, ಜಾಮೀನಿನಲ್ಲಿ ಮೇಲೆ ಹೊರ ಬಂದಿದ್ದಾರೆ. ಕಾಡಿನ ಬಂಡೆ ಕೆಳಗೆ ಹೂತಿಟ್ಟಿದ್ದ ಹಾಗೂ ಗಿರಿವಿ ಇಟ್ಟಿದ್ದ ಒಟ್ಟು ₹81.25 ಲಕ್ಷ ಮೌಲ್ಯದ ಚಿನ್ನಾಭರಣ, 1 ಕೆ.ಜಿ 141 ಗ್ರಾಂ. ತೂಕದ ಆಭರಣ ವಶಕ್ಕೆ ಪಡೆಯಲಾಗಿದೆ ಎಂದರು.

ಪ್ರೇಯಸಿಗೆ ನೀಡಿದ್ದ ಆಭರಣ: ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಫೈಜ್ ಮಸೀದಿ ಬಳಿಯ ಮನೆಯ ಬೀಗ ಒಡೆದು ಚಿನ್ನ ಮತ್ತು ಬೆಳ್ಳಿ ಕಳ್ಳತನ ಮಾಡಿದ್ದ ರಘು ಅಲಿಯಾಸ್ ಪೆಪ್ಸಿ (26) ಮತ್ತು ಕಾರ್ತಿಕ್ ಅಲಿಯಾಸ್​ ಎಸ್ಕೇಪ್ ಕಾರ್ತಿಕ್ (36) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹ 31 ಲಕ್ಷ ಮೌಲ್ಯದ 470 ಗ್ರಾಂ. ಚಿನ್ನ, 3 ಕೆ.ಜಿ ಬೆಳ್ಳಿ ಗಟ್ಟಿ ವಶಕ್ಕೆ ಪಡೆಯಲಾಗಿದೆ.

ಆರೋಪಿ ರಘು, ಕಳವು ಮಾಡಿದ್ದ ಚಿನ್ನವನ್ನು ಪ್ರೇಯಸಿ ಹಾಗೂ ಸ್ನೇಹಿತರಿಗೆ ನೀಡುತ್ತಿದ್ದ. ಜೊತೆಗೆ ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿ ಅಡವಿಟ್ಟಿದ್ದ. ಬನಶಂಕರಿಯ ಕಾವೇರಿನಗರದಲ್ಲಿರುವ ಆತನ ಪ್ರೇಯಸಿಯ ಮನೆಯಿಂದ 48 ಗ್ರಾಂ. ತೂಕದ ಚಿನ್ನ ಹಾಗೂ ಗಿರವಿ ಅಂಗಡಿಯಲ್ಲಿ ಅಡವಿಟ್ಟಿದ್ದ ಚಿನ್ನಾಭರಣ ಪಡೆಯಲಾಗಿದೆ. ರಘು ವಿರುದ್ಧ 27, ಕಾರ್ತಿಕ್ ವಿರುದ್ಧ 38 ಪ್ರಕರಣಗಳು ದಾಖಲಾಗಿವೆ. ಈ ಇಬ್ಬರು ತಲೆ ಮರೆಸಿಕೊಂಡಿದ್ದರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.