
ಬೆಂಗಳೂರು: ಚಿನ್ನದ ಮೇಲೆ ಬಡ್ಡಿರಹಿತ ಸಾಲ ನೀಡುವುದಾಗಿ ಜಾಹೀರಾತು ನೀಡಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ನಗರ ಕೇಂದ್ರ ಅಪರಾಧ ಶಾಖೆಯ(ಸಿಸಿಬಿ) ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಸಲಾಂ ಹಾಗೂ ಅಜಿತ್ ಬಂಧಿತರು.
ಬಂಧಿತರಿಂದ ₹1.80 ಕೋಟಿ ಮೌಲ್ಯದ 1 ಕೆ.ಜಿ 478 ಗ್ರಾಂ ಚಿನ್ನಾಭರಣ, ಐದು ಕೆ.ಜಿ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳಿಬ್ಬರು ವಿದ್ಯಾರಣ್ಯಪುರದಲ್ಲಿ ಚಿನ್ನಾಭರಣ ಮಾರಾಟ ಮಳಿಗೆ ತೆರೆದಿದ್ದರು. ಶೂನ್ಯ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ನೀಡುವುದಾಗಿ ಜಾಹೀರಾತು ನೀಡಿದ್ದರು. ಈ ಪ್ರಚಾರವನ್ನು ನಂಬಿದ್ದ ಅನೇಕರು ಚಿನ್ನವನ್ನು ಅಡಮಾನವಿಡಲು ಮುಂದಾಗಿದ್ದರು. ಚಿನ್ನದ ಮೌಲ್ಯದ ಮೇಲೆ ಶೇ 50 ಹಣವನ್ನು ಆರೋಪಿಗಳು ನೀಡುತ್ತಿದ್ದರು. ಕನಿಷ್ಠ 11 ತಿಂಗಳ ಅವಧಿವರೆಗೂ ಚಿನ್ನವನ್ನು ಬಿಡಿಸಿಕೊಳ್ಳಬಾರದು ಎಂದು ಷರತ್ತು ವಿಧಿಸುತ್ತಿದ್ದರು. ಜನರಿಂದ 4 ಕೆ.ಜಿ ಚಿನ್ನ ಅಡಮಾನ ಇಟ್ಟುಕೊಂಡಿದ್ದರು. ಆ ಚಿನ್ನವನ್ನು ಎಚ್‌ಆರ್‌ಬಿಆರ್ ಲೇಔಟ್‌ನ ಚಿನ್ನಾಭರಣ ಅಂಗಡಿಗೆ ಮಾರಾಟ ಮಾಡಿದ್ದರು. 11 ತಿಂಗಳ ಬಳಿಕ ಅಂಗಡಿಯನ್ನು ಬಂದ್ ಮಾಡಿಕೊಂಡು ಕೇರಳಕ್ಕೆ ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.
ಮನೆ ಕೆಲಸದ ಮಹಿಳೆಯನ್ನು ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದೇನೆಜಿ.ಪರಮೇಶ್ವರ, ಗೃಹ ಸಚಿವ
ಆರೋಪಿಗಳು ಕೇರಳದಿಂದ ನಗರಕ್ಕೆ ವಾಪಸ್ ಬಂದಿರುವ ಮಾಹಿತಿ ಆಧರಿಸಿ ಪೀಣ್ಯದಲ್ಲಿ ವಶಕ್ಕೆ ಪಡೆದು ಬಂಧಿಸಲಾಯಿತು. ಆರೋಪಿಗಳಿಬ್ಬರು ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದೇ ರೀತಿ ವಂಚನೆ ನಡೆಸಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
‘ಚಿನ್ನವನ್ನು ಅಡಮಾನ ಇಡುವ ಮೊದಲು ಸಂಸ್ಥೆಯ ಪರವಾನಗಿ ಮತ್ತು ನೈಜತೆ ಪರಿಶೀಲಿಸಿಕೊಳ್ಳಬೇಕು. ಶೂನ್ಯ ಬಡ್ಡಿ ಎನ್ನುವ ಅಸಾಧ್ಯ ಯೋಜನೆಗಳಿಗೆ ಬಲಿಯಾಗಬಾರದು. ಅನುಮಾನಸ್ಪದ ಜಾಹೀರಾತು ಹಾಗೂ ಯೋಜನೆಗಳು ಕಂಡುಬಂದರೆ ಸಮೀಪದ ಪೊಲೀಸ್ ಠಾಣೆಗೆ ಅಥವಾ ಸಿಸಿಬಿ ವಿಭಾಗಕ್ಕೆ ತಕ್ಷಣವೇ ಮಾಹಿತಿ ನೀಡಬಹುದು’ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ತಿಳಿಸಿದರು.
ಮಹಿಳೆ ಮೇಲೆ ಪೊಲೀಸರ ಹಲ್ಲೆ: ವರದಿಗೆ ಸೂಚನೆ
ಬೆಂಗಳೂರು: ಪಶ್ಚಿಮ ಬಂಗಾಳದ ಮಹಿಳೆಯ ಮೇಲೆ ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅವರಿಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಹೇಳಿದರು.
ಪೊಲೀಸ್ ಸಿಬ್ಬಂದಿಯ ತಪ್ಪು ಸಾಬೀತಾದರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಸುಂದರಿ ಬೀಬಿ (34) ಅವರು ವರ್ತೂರು ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದಾರೆ. ಅ.31ರಂದು ಫ್ಲ್ಯಾಟ್‌ನಲ್ಲಿ ಕಸ ಗುಡಿಸುವಾಗ ₹100 ಸಿಕ್ಕಿತ್ತು. ಅದನ್ನು ಮಾಲೀಕರಿಗೆ ಕೊಟ್ಟಿದ್ದರು. ಆದರೆ ಹಣದ ಜೊತೆಗೆ ಮನೆಯಲ್ಲಿ ಚಿನ್ನದ ಉಂಗುರ ಕಳ್ಳತನವಾಗಿದೆ ಎಂದು ಆರೋಪಿಸಿದ್ದ ಮಾಲೀಕರು ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸುಂದರಿ ಬೀಬಿ ಹಾಗೂ ಅವರ ಪತಿಯನ್ನು ಠಾಣೆಗೆ ಕರೆದೊಯ್ದು ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವೈಟ್‌ಫೀಲ್ಡ್ ಉಪ ವಿಭಾಗದ ಡಿಸಿಪಿಗೆ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಅವರೂ ಸೂಚನೆ ನೀಡಿ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.