ADVERTISEMENT

ಬೆಂಗಳೂರು: ಮಾಜಿ ಕಾರ್ಪೊರೇಟರ್ ಮನೆಯಲ್ಲಿದ್ದ ಚಿನ್ನಕ್ಕೆ ಕನ್ನ

₹78.50 ಲಕ್ಷ ಮೌಲ್ಯದ 1.85 ಕೆ.ಜಿ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 16:11 IST
Last Updated 29 ಜುಲೈ 2025, 16:11 IST
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಚಿನ್ನಾಭರಣವನ್ನು ಪರಿಶೀಲಿಸಿದ ಪೊಲೀಸರು 
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಚಿನ್ನಾಭರಣವನ್ನು ಪರಿಶೀಲಿಸಿದ ಪೊಲೀಸರು    

ಬೆಂಗಳೂರು: ಮಾಜಿ ಕಾರ್ಪೊರೇಟರ್ ಮನೆಯಲ್ಲಿ 1.85 ಕೆ.ಜಿ ಚಿನ್ನಾಭರಣ ದೋಚಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಘುವನಹಳ್ಳಿಯ ರಘು ಅಲಿಯಾಸ್ ಪೆಪ್ಸಿ ರಘು (25), ತ್ಯಾಗರಾಜನಗರದ ಮಿಥುನ್ ಅಲಿಯಾಸ್‌ ಮಿಲ್ಕಿ (24), ನಾಯಂಡಳ್ಳಿಯ ಜೈದೀಪ್ (25) ಬಂಧಿತರು.

ಆರೋಪಿಗಳಿಂದ ₹78.50 ಲಕ್ಷ ಮೌಲ್ಯದ 1.85 ಕೆ.ಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಜಯನಗರ ಐದನೇ ಬ್ಲಾಕ್‌ ನಿವಾಸಿ, ಬಿಬಿಎಂಪಿ ಮಾಜಿ ಸದಸ್ಯರಾದ ಟಿ.ಎಸ್.ವಸಂತ್ ಕುಮಾರ್ ಅವರ ಮನೆಯಲ್ಲಿ ಜುಲೈ 20ರಂದು ಕಳ್ಳತನ ನಡೆದಿತ್ತು. ಮನೆಯ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಡೆಲಿವರಿ ಎಕ್ಸಿಕ್ಯುಟಿವ್‌ಗಳ ಸೋಗಿನಲ್ಲಿ ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ಸುತ್ತಾಟ ನಡೆಸುತ್ತಿದ್ದ ಆರೋಪಿಗಳು, ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತ್ತಿದ್ದರು. ರಾತ್ರಿ ವೇಳೆ ಆ ಮನೆಗೆ ಬಂದು ಬೀಗ ಮುರಿದು ಕಳ್ಳತನ ಮಾಡಿ ಪರಾರಿ ಆಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ರೋಲೆಕ್ಸ್ ವಾಚ್ ಕಳವು:
ಜುಲೈ 20ರಂದು ಸಂಜೆ ವಿಮಾನ ನಿಲ್ದಾಣಕ್ಕೆ ಪುತ್ರನನ್ನು ಬಿಟ್ಟು ಬರಲು ವಸಂತ್ ಕುಮಾರ್ ತೆರಳಿದ್ದರು. ಅಂದೇ ರಾತ್ರಿ ವಾಪಸ್ ಬಂದು ನೋಡಿದಾಗ ಮನೆಯ ಬೀಗ ಒಡೆದು ₹1 ಕೋಟಿ ಮೌಲ್ಯದ ಚಿನ್ನಾಭರಣ, ರೋಲೆಕ್ಸ್ ವಾಚ್, ನಗದು ದೋಚಿರುವುದು ಕಂಡುಬಂದಿತ್ತು. ವಸಂತ್‌ಕುಮಾರ್ ಅವರು ನೀಡಿದ ದೂರು ಆಧರಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳು ಸ್ಕೂಟಿಯಲ್ಲಿ ಬಂದು ಮನೆಯ ಒಳಗೆ ಹೋಗುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಚಿನ್ನಾಭರಣ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಪೊಲೀಸರು ಹೇಳಿದರು.

ರಘು 
ಮಿಥುನ್‌ 
ಜೈದೀಪ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.